
ನವದೆಹಲಿ, 10 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದೆಹಲಿ ಪೊಲೀಸ್ ವಿಶೇಷ ತಂಡ ಮಹತ್ವದ ಕಾರ್ಯಾಚರಣೆಯಲ್ಲಿ ಅಂತರರಾಜ್ಯ ಮಟ್ಟದಲ್ಲಿ ಸಕ್ರಿಯವಾಗಿದ್ದ ಭಯೋತ್ಪಾದಕ, ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಬೇಹುಗಾರಿಕೆ ಜಾಲವನ್ನು ಭೇದಿಸಿದೆ. ಈ ಜಾಲವು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಹಾಗೂ ನಿಷೇಧಿತ ಸಂಘಟನೆ ಬಿಕೆಐ ಜೊತೆ ನೇರ ಸಂಪರ್ಕ ಹೊಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ದೆಹಲಿ ಮತ್ತು ಪಂಜಾಬಿನಿಂದ ಒಟ್ಟು 11 ಆರೋಪಿಗಳನ್ನು ಬಂಧಿಸಲಾಗಿದೆ. ಸಮಯೋಚಿತ ಕ್ರಮದಿಂದ ದೊಡ್ಡ ಭಯೋತ್ಪಾದಕ ಸಂಚು ವಿಫಲಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.
ಎರಡು ಹಂತದ ಕಾರ್ಯಾಚರಣೆ:
ವಿಶೇಷ ಘಟಕದ ಉತ್ತರ ಮತ್ತು ನೈಋತ್ಯ ಶ್ರೇಣಿಗಳ ತಂಡಗಳು ಸಂಯುಕ್ತ ಕಾರ್ಯಾಚರಣೆ ನಡೆಸಿದ್ದು, ಮೊದಲ ಹಂತದಲ್ಲಿ ಪಂಜಾಬ್ ಮತ್ತು ದೆಹಲಿಯಿಂದ ಆರು ಮಂದಿ, ಎರಡನೇ ಹಂತದಲ್ಲಿ ಪಂಜಾಬಿನಿಂದ ಐವರು ಬಂಧಿತರಾಗಿದ್ದಾರೆ. ತಾಂತ್ರಿಕ ನಿಗಾವಳಿ ಹಾಗೂ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಸಿ.ಸಿ.ಟಿ.ವಿ ಮೂಲಕ ಬೇಹುಗಾರಿಕೆ
ತನಿಖೆಯಲ್ಲಿ ಆರೋಪಿಗಳು ದೇಶದ ಸೂಕ್ಷ್ಮ ಸೈನಿಕ ಹಾಗೂ ಭದ್ರತಾ ಪ್ರದೇಶಗಳ ಬಳಿ ಒಂಬತ್ತು ಸೌರಶಕ್ತಿ ಚಾಲಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವುದು ಬೆಳಕಿಗೆ ಬಂದಿದೆ. ಕಪುರ್ತಲಾ, ಜಲಂಧರ್, ಪಠಾಣ್ಕೋಟ್, ಪಟಿಯಾಲಾ, ಮೋಗಾ, ಅಂಬಾಲಾ, ಕಥುವಾ, ಬಿಕಾನೇರ್ ಮತ್ತು ಅಲ್ವಾರ್ ಪ್ರದೇಶಗಳಲ್ಲಿ ಇವುಗಳನ್ನು ಅಳವಡಿಸಲಾಗಿತ್ತು. ಈ ಕ್ಯಾಮೆರಾಗಳ ಲೈವ್ ಫೀಡ್ ಅನ್ನು ಮೊಬೈಲ್ ಆಪ್ಗಳ ಮೂಲಕ ಪಾಕಿಸ್ತಾನ ಮೂಲದ ನಿರ್ವಾಹಕರಿಗೆ ಕಳುಹಿಸಲಾಗುತ್ತಿತ್ತು.
ಶಸ್ತ್ರಾಸ್ತ್ರ ಹಾಗೂ ಉಪಕರಣಗಳ ವಶ:
ಪೊಲೀಸರು ಆರೋಪಿಗಳಿಂದ ಮೂರು ವಿದೇಶಿ ಪಿಸ್ತೂಲುಗಳು, ಒಂದು ದೇಶೀಯ ಪಿಸ್ತೂಲ್ ಹಾಗೂ 24 ಜೀವಂತ ಕಾರ್ಟ್ರಿಜ್ಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಸಿಸಿಟಿವಿ ಕ್ಯಾಮೆರಾಗಳು, ಸಿಮ್ ಕಾರ್ಡ್ಗಳು, ಮೊಬೈಲ್ ಫೋನ್ಗಳು, ಕಾರುಗಳು ಮತ್ತು ಬೈಕ್ಗಳನ್ನು ಕೂಡ ಜಪ್ತಿ ಮಾಡಲಾಗಿದೆ.
ಮೊದಲ ಬಂಧನದಿಂದ ಜಾಲ ಬಹಿರಂಗ:
ಮಾರ್ಚ್ 29ರಂದು ತರ್ನ್ ತರಾನ್ನಲ್ಲಿ ಮನ್ಪ್ರೀತ್ ಸಿಂಗ್ ಬಂಧನವಾದ ಬಳಿಕ ಇಡೀ ಜಾಲ ಬೆಳಕಿಗೆ ಬಂದಿದೆ. ಆತ ಪಾಕಿಸ್ತಾನ ಮೂಲದ ನಿರ್ವಾಹಕರ ಸೂಚನೆಯ ಮೇರೆಗೆ ವಿದೇಶಿ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಸಾಗಣೆ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ನಕಲಿ ಗುರುತುಗಳಲ್ಲಿ ಸಿಮ್ ಕಾರ್ಡ್ಗಳನ್ನು ಪಡೆದು ಜಾಲದ ಸದಸ್ಯರಿಗೆ ನೀಡುತ್ತಿದ್ದನು.
ಯುವಕರ ಸೆಳೆತ ಮತ್ತು ಹಣಕಾಸು ಜಾಲ:
ಆರೋಪಿಗಳು ಹಣ ಹಾಗೂ ಇತರ ಪ್ರಲೋಭನೆಗಳ ಮೂಲಕ ಯುವಕರನ್ನು ಸೆಳೆಯುತ್ತಿದ್ದರು. ಬೇಹುಗಾರಿಕೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಭದ್ರತಾ ಮಾಹಿತಿ ಸಂಗ್ರಹಣೆಯಲ್ಲಿ ಅವರನ್ನು ಬಳಸಲಾಗುತ್ತಿತ್ತು. ಯುಪಿಐ ಸೇರಿದಂತೆ ವಿವಿಧ ಮಾರ್ಗಗಳಿಂದ ಹಣ ವರ್ಗಾವಣೆ ನಡೆಯುತ್ತಿತ್ತು.
ಗ್ರೆನೇಡ್ ದಾಳಿ ಸಂಚು ವಿಫಲ:
ಈ ಜಾಲವು ಭದ್ರತಾ ಸ್ಥಾಪನೆಗಳ ಮೇಲೆ ಗ್ರೆನೇಡ್ ದಾಳಿ ನಡೆಸಲು ಯೋಜನೆ ರೂಪಿಸಿದ್ದರೂ, ಪೊಲೀಸರ ಸಮಯೋಚಿತ ಕ್ರಮದಿಂದ ಅದನ್ನು ವಿಫಲಗೊಳಿಸಲಾಗಿದೆ.
ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಬಂಧನಗಳು ಹಾಗೂ ಮಹತ್ವದ ಮಾಹಿತಿ ಹೊರಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa