
ಟೆಲ್ ಅವೀವ್, 10 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಇಸ್ರೇಲ್ ಮತ್ತು ಪಾಕಿಸ್ತಾನ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕಾ–ಇರಾನ್ ಶಾಂತಿ ಮಾತುಕತೆಗಳ ಹಿನ್ನೆಲೆಯಲ್ಲೇ ಈ ಮಾತಿನ ಚಕಮಕಿ ಉಲ್ಬಣಗೊಂಡಿದ್ದು, ಎರಡೂ ರಾಷ್ಟ್ರಗಳು ಪರಸ್ಪರ ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿವೆ.
ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಇತ್ತೀಚೆಗೆ ಲೆಬನಾನ್ ಮೇಲಿನ ದಾಳಿಯನ್ನು ಉಲ್ಲೇಖಿಸಿ ಇಸ್ರೇಲ್ ಅನ್ನು “ಕ್ಯಾನ್ಸರ್ ರಾಷ್ಟ್ರ” ಎಂದು ಕರೆಯುವ ಮೂಲಕ ವಿವಾದಕ್ಕೆ ಕಾರಣರಾದರು. ಈ ಹೇಳಿಕೆಯನ್ನು ಇಸ್ರೇಲ್ ತೀವ್ರವಾಗಿ ಖಂಡಿಸಿದ್ದು, ಇದನ್ನು “ನಾಚಿಕೆಗೇಡು ಹಾಗೂ ಖಂಡನೀಯ” ಎಂದು ಪ್ರತಿಕ್ರಿಯಿಸಿದೆ. ಗಮನಾರ್ಹವಾಗಿ, ಪಾಕಿಸ್ತಾನ ಇಂದಿಗೂ ಇಸ್ರೇಲ್ ಅನ್ನು ಅಧಿಕೃತವಾಗಿ ರಾಷ್ಟ್ರವಾಗಿ ಮಾನ್ಯತೆ ನೀಡಿಲ್ಲ.
ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ, ಪಾಕಿಸ್ತಾನದ ಹೇಳಿಕೆಯನ್ನು ತೀವ್ರವಾಗಿ ತಿರಸ್ಕರಿಸಿ, “ಇಸ್ರೇಲ್ನ ನಿರ್ಮೂಲನೆಗೆ ಕರೆ ನೀಡುವಂತ ಹೇಳಿಕೆಗಳು ಅಸ್ವೀಕಾರಾರ್ಹ” ಎಂದು ಹೇಳಿದೆ. ಶಾಂತಿಯ ಮಧ್ಯವರ್ತಿತ್ವ ಮಾಡುವುದಾಗಿ ಹೇಳಿಕೊಳ್ಳುವ ಸರ್ಕಾರದಿಂದ ಇಂತಹ ಹೇಳಿಕೆ ನಿರೀಕ್ಷಿಸಲಾರದದ್ದು ಎಂದು ಕಚೇರಿ ತಿಳಿಸಿದೆ.
ಇದೇ ವೇಳೆ, ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯನ್ ಸಾರ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ಯಹೂದಿ ರಾಷ್ಟ್ರವನ್ನು ‘ಕ್ಯಾನ್ಸರ್’ ಎಂದು ಕರೆಯುವುದು ನಾಶದ ಕರೆಗೇ ಸಮಾನ. ಇಸ್ರೇಲ್ ತನ್ನನ್ನು ನಾಶಮಾಡಲು ಯತ್ನಿಸುವ ಭಯೋತ್ಪಾದಕರ ವಿರುದ್ಧ ತನ್ನ ರಕ್ಷಣೆಯನ್ನು ಮುಂದುವರಿಸುತ್ತದೆ” ಎಂದು ಹೇಳಿದ್ದಾರೆ.
ಇದರ ಮಧ್ಯೆ, ಲೆಬನಾನ್ನಲ್ಲಿ ಇಸ್ರೇಲ್ ನಡೆಸಿದ ಭಾರೀ ವಾಯುದಾಳಿಗಳು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿವೆ. ಕೆಲವೇ ನಿಮಿಷಗಳಲ್ಲಿ ನೂರಕ್ಕೂ ಹೆಚ್ಚು ಗುರಿಗಳನ್ನು ಹೊಡೆದ ಈ ದಾಳಿಯಲ್ಲಿ 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರೆಂದು ವರದಿಯಾಗಿದೆ. ಇಸ್ರೇಲ್ ಪ್ರಕಾರ, ಈ ದಾಳಿ ಹೆಜ್ಬೊಲ್ಲಾಹ್ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿದೆ.
ಆದರೆ, ಯುದ್ಧದ ಮಧ್ಯೆಯೇ ಶಾಂತಿಯತ್ತ ಹೆಜ್ಜೆಯಿಟ್ಟಿರುವ ಸೂಚನೆಯಾಗಿ, ಇಸ್ರೇಲ್ ಲೆಬನಾನ್ ಜೊತೆಗೆ ನೇರ ಮಾತುಕತೆಗಳಿಗೆ ಸಮ್ಮತಿಸಿದೆ. ಹೆಜ್ಬೊಲ್ಲಾಹ್ ನಿಶಸ್ತ್ರೀಕರಣ ಮತ್ತು ಎರಡು ದೇಶಗಳ ನಡುವಿನ ಶಾಂತಿ ಒಪ್ಪಂದವೇ ಮಾತುಕತೆಯ ಮುಖ್ಯ ಉದ್ದೇಶವಾಗಿರಲಿದೆ ಎಂದು ನೆತನ್ಯಾಹು ತಿಳಿಸಿದ್ದಾರೆ.
ಈ ಬೆಳವಣಿಗೆಗಳು ಇರಾನ್–ಅಮೆರಿಕಾ ಸಂಯುಕ್ತ ಸಂಸ್ಥಾನ ನಡುವಿನ ಶಾಂತಿ ಚರ್ಚೆಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಲೆಬನಾನ್ ವಿಚಾರವನ್ನು ಈ ಮಾತುಕತೆಗಳ ವ್ಯಾಪ್ತಿಗೆ ತರಬೇಕೇ ಎಂಬುದರ ಬಗ್ಗೆ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳು ಸ್ಪಷ್ಟವಾಗಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa