
ಅಮೃತಸರ, 10 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಖಾಲ್ಸಾ ಸಜ್ನಾ ದಿವಸ್ (ವೈಶಾಖಿ) ಅಂಗವಾಗಿ ಪಾಕಿಸ್ತಾನದ ಐತಿಹಾಸಿಕ ಗುರುದ್ವಾರಗಳಿಗೆ ಭೇಟಿ ನೀಡಲು ಭಾರತದ ವಿವಿಧ ಭಾಗಗಳಿಂದ ಸುಮಾರು 2,840 ಸಿಖ್ ಯಾತ್ರಿಕರು ಶುಕ್ರವಾರ ಬೆಳಿಗ್ಗೆ ಅಟ್ಟಾರಿ-ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಿದರು.
ಈ ಯಾತ್ರೆಗೆ ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ (ಎಸ್ಜಿಪಿಸಿ) ವತಿಯಿಂದ 1,763 ಭಕ್ತರ ಜಥೆಗೆ ವಿಶೇಷ ಹಸಿರು ನಿಶಾನೆ ತೋರಿಸಲಾಯಿತು. ಇದಲ್ಲದೆ, ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಹಾಗೂ ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳ ಭಕ್ತರೂ ಭಾಗವಹಿಸಿದ್ದಾರೆ.
ಎಸ್ಜಿಪಿಸಿ ಸದಸ್ಯ ಸುರ್ಜಿತ್ ಸಿಂಗ್ ತುಘಲವಾಲ್ ಅವರ ನೇತೃತ್ವದಲ್ಲಿ ಯಾತ್ರಾರ್ಥಿಗಳು ಪಾಕಿಸ್ತಾನದ ಪ್ರಮುಖ ಗುರುಧಾಮಗಳಾದ ಗುರುದ್ವಾರ ನಂಕಾನಾ ಸಾಹಿಬ್ ಮತ್ತು ಗುರುದ್ವಾರ ಪಂಜಾ ಸಾಹಿಬ್ ಸೇರಿದಂತೆ ಹಲವು ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಈ 10 ದಿನಗಳ ಯಾತ್ರೆ ಏಪ್ರಿಲ್ 19ರಂದು ಮುಕ್ತಾಯಗೊಳ್ಳಲಿದೆ.
ವೀಸಾ ಪ್ರಕ್ರಿಯೆಯಲ್ಲಿ 1,795 ಅರ್ಜಿಗಳಲ್ಲಿ 1,763 ಮಂದಿಗೆ ಅನುಮತಿ ದೊರೆತಿದ್ದು, 32 ಮಂದಿಯ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಎಸ್ಜಿಪಿಸಿ ಅಧಿಕಾರಿಗಳು ತಿಳಿಸಿದ್ದಾರೆ. ವೀಸಾ ಸಿಗದ ಭಕ್ತರು ನಿರಾಶೆ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಹೆಚ್ಚಿನ ಭಕ್ತರಿಗೆ ವೀಸಾ ನೀಡುವಂತೆ ಹಾಗೂ ಕರ್ತಾರ್ಪುರ ಕಾರಿಡಾರ್ ಸುಗಮಗೊಳಿಸುವಂತೆ, ವಿಧಿಸಲಾಗಿರುವ $20 ಶುಲ್ಕವನ್ನು ರದ್ದುಪಡಿಸುವಂತೆ ಭಕ್ತರು ಮನವಿ ಮಾಡಿದ್ದಾರೆ.
ಈ ಬಾರಿ ಸುಮಾರು 200 ಒಂಟಿ ಮಹಿಳೆಯರಿಗೆ ವೀಸಾ ನೀಡಿರುವುದು ವಿಶೇಷವಾಗಿದ್ದು, ಭದ್ರತಾ ದೃಷ್ಟಿಯಿಂದ ಕಟ್ಟುನಿಟ್ಟಿನ ಪರಿಶೀಲನಾ ಕ್ರಮಗಳನ್ನು ಅನುಸರಿಸಲಾಗಿದೆ. ಪ್ರತಿಯೊಬ್ಬ ಮಹಿಳಾ ಯಾತ್ರಾರ್ಥಿಯೂ ಧಾರ್ಮಿಕ ಉದ್ದೇಶಕ್ಕಾಗಿ ಮಾತ್ರ ಪ್ರಯಾಣಿಸುತ್ತಿರುವುದಾಗಿ ಲಿಖಿತ ಭರವಸೆ ನೀಡಬೇಕಾಗಿದೆ.
ಹಿಂದಿನ ವರ್ಷ ಸರಬ್ಜಿತ್ ಕೌರ್ ಪ್ರಕರಣದ ನಂತರ, ಈ ಬಾರಿ ಭದ್ರತಾ ಸಂಸ್ಥೆಗಳು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಯಾತ್ರೆಯಲ್ಲಿ ಪಾರದರ್ಶಕತೆ ಮತ್ತು ಸುರಕ್ಷತೆ ಕಾಪಾಡಲು ಬಹು ಹಂತದ ಪರಿಶೀಲನಾ ಕ್ರಮಗಳನ್ನು ಜಾರಿಗೆ ತರಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa