
ಬೆಂಗಳೂರು, 09 ಮಾರ್ಚ್ (ಹಿ.ಸ.):
ಆ್ಯಂಕರ್:
ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಯಲು ಗರ್ಭಿಣಿಯರನ್ನು 10ನೇ ವಾರದಲ್ಲಿಯೇ ಕಡ್ಡಾಯವಾಗಿ ನೋಂದಣಿ ಮಾಡುವ ಕ್ರಮವನ್ನು ಜಾರಿಗೆ ತರಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಸದಸ್ಯೆ ಉಮಾಶ್ರೀ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೆಣ್ಣು ಭ್ರೂಣ ಹತ್ಯೆ ಒಂದು ಗಂಭೀರ ಸಾಮಾಜಿಕ ಪಿಡುಗಾಗಿದ್ದು, ಕೇವಲ ಕಾನೂನು ಮಾಡುವುದರಿಂದ ಮಾತ್ರ ಇದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಕೆಲ ಪ್ರದೇಶಗಳಲ್ಲಿ ಗಂಡುಮಕ್ಕಳಿದ್ದರೆ ಮಾತ್ರ ವಂಶ ಬೆಳೆಯುತ್ತದೆ ಎಂಬ ತಪ್ಪು ಮನೋಭಾವನೆ ಇನ್ನೂ ಮುಂದುವರಿದಿದೆ. ಇದನ್ನು ಬದಲಿಸಲು ಸರ್ಕಾರ ಜನಜಾಗೃತಿ ಕಾರ್ಯಕ್ರಮಗಳ ಜೊತೆಗೆ ಕಾನೂನಾತ್ಮಕ ಕ್ರಮಗಳನ್ನೂ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪಿಎನ್‌ಡಿಟಿ ಕಾಯ್ದೆ ಸೇರಿದಂತೆ ಹಲವು ಕಾನೂನುಗಳಡಿ ಕ್ರಮ ಕೈಗೊಳ್ಳಲಾಗುತ್ತಿದೆ. “ಬಾಲಿಕಾ” ಸಾಫ್ಟ್‌ವೇರ್ ಮೂಲಕ ಎಲ್ಲಾ ಸ್ಕ್ಯಾನಿಂಗ್ ಕೇಂದ್ರಗಳ ಕಡ್ಡಾಯ ನೋಂದಣಿ ಮತ್ತು ನವೀಕರಣ ನಡೆಯುತ್ತಿದೆ ಎಂದು ಹೇಳಿದರು.
ಈವರೆಗೆ 80 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದ್ದು, 70 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಮೂರು ವೈದ್ಯರು ಮತ್ತು ಐದು ನರ್ಸ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇಲಾಖೆಯ ಅಧಿಕಾರಿಗಳು ಗುಪ್ತ ಕಾರ್ಯಾಚರಣೆ ನಡೆಸುತ್ತಿದ್ದು, ಅಲ್ಟ್ರಾಸೌಂಡ್ ಕೇಂದ್ರಗಳಲ್ಲಿ ನಿಯಮಿತ ತಪಾಸಣೆ ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ಹೆಣ್ಣುಮಕ್ಕಳ ಬಗ್ಗೆ ಸಕಾರಾತ್ಮಕ ಮನೋಭಾವನೆ ಮೂಡಿಸಲು ಭಾಗ್ಯಲಕ್ಷ್ಮಿ ಯೋಜನೆ ಮತ್ತು ಗೃಹ ಲಕ್ಷ್ಮಿ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಮಹಿಳೆಯರಿಗೆ ಉಚಿತ ಶಿಕ್ಷಣ ಮತ್ತು ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಮಾಜದಲ್ಲಿ ಸಮಾನತೆ ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.
ಖಚಿತ ಮಾಹಿತಿಯ ಆಧಾರದ ಮೇಲೆ ಏಳು ಕಡೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ. ಲಿಂಗ ಪತ್ತೆ ಪ್ರಕರಣಗಳ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದು, ಈಗಾಗಲೇ ಮೂವರು ಮಾಹಿತಿ ನೀಡಿ ಬಹುಮಾನ ಪಡೆದಿದ್ದಾರೆ.
ಭ್ರೂಣದ ಲಿಂಗ ಪತ್ತೆ ಪ್ರಕ್ರಿಯೆ ಸಾಮಾನ್ಯವಾಗಿ 12 ವಾರಗಳ ನಂತರ ಮಾತ್ರ ಸಾಧ್ಯವಾಗುವುದರಿಂದ, ಇದುವರೆಗೆ 12ನೇ ವಾರದ ನಂತರ ಗರ್ಭಿಣಿಯರ ನೋಂದಣಿ ಮಾಡಲಾಗುತ್ತಿತ್ತು. ಆದರೆ ಈಗ ಅದನ್ನು 10ನೇ ವಾರದಲ್ಲಿಯೇ ಕಡ್ಡಾಯಗೊಳಿಸಲಾಗಿದೆ. ಇದರಿಂದ ಭ್ರೂಣ ಹತ್ಯೆ ತಡೆಯಲು ಸಹಾಯವಾಗಲಿದೆ ಎಂದು ಸಚಿವರು ಹೇಳಿದರು.
ಇನ್ನೂ, ಭ್ರೂಣ ಹತ್ಯೆ ತಡೆಯಲು ಎಲ್ಲಾ ಜಿಲ್ಲೆಗಳಲ್ಲಿ ಹಿರಿಯ ವೈದ್ಯರನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಸ್ಕ್ಯಾನಿಂಗ್ ಕೇಂದ್ರಗಳು ಹೆಚ್ಚು ಇರುವ ಬೆಂಗಳೂರಿನಲ್ಲಿ ಐದು ನೋಡಲ್ ಅಧಿಕಾರಿಗಳನ್ನು ನೇಮಿಸಿ ನಿಯಮಿತ ತಪಾಸಣೆ ನಡೆಸಲಾಗುತ್ತಿದೆ.
ಮೊಬೈಲ್ ಅಲ್ಟ್ರಾಸೌಂಡ್ ಯಂತ್ರಗಳ ಬಳಕೆ ಮತ್ತೊಂದು ಸವಾಲಾಗಿ ಎದುರಾಗಿದ್ದು, ಜನಜಾಗೃತಿ, ಕಾನೂನು ಕ್ರಮ ಮತ್ತು ಇಲಾಖೆಯ ನಿಗಾದ ಮೂಲಕ ಈ ಸಾಮಾಜಿಕ ಸಮಸ್ಯೆಯನ್ನು ತಡೆಯಲು ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ ಎಂದು ಸಚಿವರು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa