
ಬೆಂಗಳೂರು, 09 ಮಾರ್ಚ್ (ಹಿ.ಸ.):
ಆ್ಯಂಕರ್:ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿರುವ ಶತಮಾನಗಳ ಇತಿಹಾಸ ಹೊಂದಿರುವ ಕೆಎಸ್ಐಸಿ ಫಿಲೇಚರ್ ಕಾರ್ಖಾನೆಯ 5 ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದ್ದ ಪ್ರಸ್ತಾವನೆಯನ್ನು ಕೈಬಿಟ್ಟಿರುವುದಾಗಿ ರೇಷ್ಮೆ ಸಚಿವ ಕೆ. ವೆಂಕಟೇಶ್ ಅವರು ವಿಧಾನಸಭೆಯಲ್ಲಿ ಉತ್ತರ ನೀಡಿದ್ದು, ಇದರಿಂದ ಕರ್ನಾಟಕದ ಅಸ್ಮಿತೆಯಾದ ಮೈಸೂರು ಸಿಲ್ಕ್ ಉದ್ಯಮವನ್ನು ಉಳಿಸಲು ನಡೆದ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಮೈಸೂರು ರಾಜ್ಯದ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1912ರಲ್ಲಿ ಸ್ಥಾಪಿಸಿದ್ದ ಈ ಕಾರ್ಖಾನೆ ಕರ್ನಾಟಕದ ರೇಷ್ಮೆ ಉದ್ಯಮದ ಹೆಮ್ಮೆಯ ಸಂಕೇತವಾಗಿದೆ. ಇಂತಹ ಐತಿಹಾಸಿಕ ಮಹತ್ವದ ಸಂಸ್ಥೆಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆ ಜನವಿರೋಧಿಯಾಗಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದು ಹೇಳಿದರು.
ಕ್ರೀಡಾಂಗಣ ನಿರ್ಮಾಣದ ಹೆಸರಿನಲ್ಲಿ 100 ವರ್ಷಕ್ಕೂ ಹಳೆಯದಾದ ಸುಮಾರು 500 ಮರಗಳನ್ನು ಕಡಿದು ಹಾಕುವ ಹಾಗೂ ಶತಮಾನದ ಪರಂಪರೆಯ ರೇಷ್ಮೆ ಉದ್ಯಮವನ್ನು ಹಾನಿಗೊಳಿಸುವ ಯೋಜನೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು ಎಂದು ಅವರು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ಕಾರ್ಮಿಕರು ನಡೆಸಿದ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಿತ್ತು ಎಂದರು.
ತಾವು ಖುದ್ದಾಗಿ ಕಾರ್ಖಾನೆಗೆ ಭೇಟಿ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಮಿಕರಿಗೆ ಬೆಂಬಲ ಸೂಚಿಸಿದ್ದಾಗಿ ತಿಳಿಸಿದ ಆರ್. ಅಶೋಕ್, ಜನರ ಒತ್ತಡ ಹಾಗೂ ಹೋರಾಟದ ಪರಿಣಾಮವಾಗಿ ಕಾಂಗ್ರೆಸ್ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು ಎಂದು ಹೇಳಿದರು.
ಹಲವಾರು ದಶಕಗಳಿಂದ ಉತ್ಕೃಷ್ಟ ಗುಣಮಟ್ಟದ ರೇಷ್ಮೆ ಸೀರೆಗಳ ಮೂಲಕ ದೇಶ-ವಿದೇಶಗಳಲ್ಲಿ ಖ್ಯಾತಿ ಗಳಿಸಿರುವ ಕೆಎಸ್ಐಸಿ ಮೈಸೂರು ಸಿಲ್ಕ್ ಉದ್ಯಮ ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಪಾರಂಪರಿಕ ಸಾರ್ವಜನಿಕ ಉದ್ದಿಮೆಯನ್ನು ಮುಚ್ಚಲು ಹೊರಟಿದ್ದ ಸರ್ಕಾರ ಕೊನೆಗೂ ತನ್ನ ನಿರ್ಧಾರವನ್ನು ಬದಲಿಸಿರುವುದು ಸ್ವಾಗತಾರ್ಹ ಎಂದು ಅವರು ಅಭಿಪ್ರಾಯಪಟ್ಟರು.
ಇನ್ನು ಮುಂದಾದರೂ ರಾಜ್ಯ ಸರ್ಕಾರ ಜನವಿರೋಧಿ ಹಾಗೂ ನಾಡದ್ರೋಹಿ ಕ್ರಮಗಳಿಗೆ ಕೈ ಹಾಕದೆ, ಉತ್ತಮ ಆಡಳಿತ ನೀಡುವತ್ತ ಗಮನ ಹರಿಸಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa