
ವಿಜಯಪುರ, 09 ಮಾರ್ಚ್ (ಹಿ.ಸ.)
ಆ್ಯಂಕರ್ : ಮಹಿಳೆಯರು ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳಲ್ಲಿ ಕ್ರಿಯಾಶೀಲರಾಗಿ ಆರ್ಥಿಕ ಸಬಲೀಕರಣ ಹೊಂದಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಯೋಜನೆ, ಸರ್ಕಾರೇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆ ಜಾರಿಗೊಳಿಸಿದೆ. ಅನೇಕ ಯೋಜನೆಗಳ ಅನುಷ್ಟಾನದ ಮೂಲಕ ಮಹಿಳೆಯರನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲರನ್ನಾಗಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸಲಾಗುತ್ತಿದೆ. ಮಹಿಳೆಯರು ಇಂದು ಎಲ್ಲ ರಂಗಗಳಲ್ಲೂ ದಾಪುಗಾಲನ್ನಿಟ್ಟಿರುವುದು ಸಂತಸದ ಸಂಗತಿ ಎಂದರು.
ಆದರೆ ಸಾಮಾಜಿಕ ಪಿಡುಗಾಗಿರುವ ಬಾಲ್ಯವಿವಾಹ, ವರದಕ್ಷಿಣೆ, ಪ್ರಸವ ಪೂರ್ವ ಲಿಂಗ ಪತ್ತೆ ಹಾಗೂ ಹತ್ಯೆ, ಕೌಟುಂಬಿಕ ಹಿಂಸೆಯಂತಹ ಸಮಸ್ಯೆಗಳನ್ನು ತೊಡೆದು ಹಾಕಲು ಸಾಕಷ್ಟು ಕಾಯ್ದೆ ಕಾನೂನು ಜಾರಿಯಲ್ಲಿದ್ದು, ಸಂಬಂಧಿಸಿದ ಇಲಾಖೆಗಳು ಈ ನಿಟ್ಟಿನಲ್ಲಿ ಕೈ ಜೋಡಿಸುವ ಮೂಲಕ ಈ ಪಿಡುಗುಗಳ ನಿರ್ಮೂಲನೆ ಹಾಗೂ ಕಡಿವಾಣಕ್ಕೆ ಕಟಿಬದ್ಧರಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಹಿಳೆಯರು ತಮಗಿರುವ ಆರ್ಥಿಕ ಸೌಲಭ್ಯಗಳ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ತಮಗಿರುವ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು ಎಂದು ಮಹಿಳೆಯರಿಗೆ ಸಲಹೆ ಮಾಡಿದರು.
ಮಹಿಳೆಯರು ಇಂದು ಬಾಹ್ಯಾಕಾಶ ಸಾಧನೆ ಮಾಡಿದ್ದಾರೆ. ಫ್ಲೈಟ್ ಓಡಿಸುತ್ತಿದ್ದಾರೆ. ಸೈನ್ಯದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಮಹಿಳಾ ಕ್ರಿಕೆಟ್ ನಲ್ಲಿ ನಮ್ಮದೇಶದ ಮಹಿಳೆಯರು ತೋರಿರುವ ಸಾಧನೆ ಅಪಾರವಾಗಿದೆ ಎಂದು ಮಹಿಳಾ ಸಾಧನೆಗಳನ್ನು ವಿವರಗಳನ್ನು ನೆರೆದ ಮಹಿಳೆಯರ ಮುಂದೆ ತೆರೆದಿಟ್ಟರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande