
ಕೋಲಾರ, ೦೯ ಮಾರ್ಚ್ (ಹಿ.ಸ)
ಆಂಕರ್ : ಕೋಲಾರ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯನ್ನು ಕನಿಷ್ಠ ಮಟ್ಟಕ್ಕೆ ತಗ್ಗಿಸಲು ಹಾಗೂ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲು ಸಂಬ0ಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ. ಆರ್.ರವಿ ಅಭಿಪ್ರಾಯಪಟ್ಟರು
ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ 'ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ'ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಐ-ರಾಡ್ ವರದಿಯ ಪ್ರಕಾರ, ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಪಘಾತಗಳ ಇಂತಿದ್ದು, ೨೦೨೩ರಲ್ಲಿ ೮೭೭ ಅಪಘಾತಗಳು ಸಂಭವಿಸಿದ್ದು, ೨೫೭ ಮಂದಿ ಮೃತಪಟ್ಟಿದ್ದಾರೆ ಮತ್ತು ೫೪೨ ಮಂದಿ ಗಾಯಗೊಂಡಿದ್ದಾರೆ. ೨೦೨೪ರಲ್ಲಿ ೯೯೮ ಅಪಘಾತಗಳಲ್ಲಿ ೩೨೦ ಸಾವುಗಳು ಸಂಭವಿಸಿದ್ದು, ೬೧೨ ಮಂದಿ ಗಾಯಗೊಂಡಿದ್ದಾರೆ. ೨೦೨೫ರಲ್ಲಿ ೯೪೨ ಅಪಘಾತಗಳು ನಡೆದಿದ್ದು, ೩೦೫ ಮಂದಿ ಸಾವನ್ನಪ್ಪಿದ್ದಾರೆ ಹಾಗೂ ೫೭೦ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ-೭೫ ಜಿಲ್ಲೆಯಲ್ಲೇ ಅತಿ ಹೆಚ್ಚು ಅಪಘಾತ ಸಂಭವಿಸುವ ವಲಯವಾಗಿ ಗುರುತಿಸಲ್ಪಟ್ಟಿದ್ದು, ೨೦೨೫ರಲ್ಲಿ ಇಲ್ಲಿ ೭೬ ಮಾರಣಾಂತಿಕ ಮತ್ತು ೧೬೬ ಸಾಮಾನ್ಯ ಅಪಘಾತಗಳು ಸಂಭವಿಸಿವೆ. ರಾಜ್ಯ ಹೆದ್ದಾರಿಗಳ ಪೈಕಿ ಎಸ್.ಹೆಚ್ -೮೨, ಎಸ್.ಹೆಚ್ -೯೬ ಮತ್ತು ಎಸ್.ಹೆಚ್ -೯೯ ರಸ್ತೆಗಳು ಹೆಚ್ಚಿನ ಅಪಾಯದ ವಲಯಗಳಾಗಿವೆ. ಜಿಲ್ಲೆಯಲ್ಲಿ ಗುರುತಿಸಲಾದ ಪ್ರಮುಖ ಕಪ್ಪು ಚುಕ್ಕೆಗಳಾದ ಅರಬಿಕೊತ್ತನೂರು, ಚುಂಚದೇನಹಳ್ಳಿ, ಮದೇರಹಳ್ಳಿ ಮತ್ತು ಅಜ್ಜಪ್ಪನಹಳ್ಳಿ ಮುಂತಾದ ಸ್ಥಳಗಳಲ್ಲಿ ತಕ್ಷಣವೇ ಇಂಜಿನಿಯರಿAಗ್ ಸುಧಾರಣೆಗಳನ್ನು ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಯಿತು.
ವಡಗೂರು ಮತ್ತು ತಂಬಹಳ್ಳಿಗಳಲ್ಲಿ ಅಂಡರ್ ಪಾಸ್ ಸಂಚಾರ ವ್ಯವಸ್ಥೆ ಹಾಗೂ ನರಸಿಂಹತೀರ್ಥ ಮತ್ತು ವಡ್ಡಹಳ್ಳಿಯಲ್ಲಿ ಮೇಲ್ಸೇತುವೆ ಕಾಮಗಾರಿಗಳನ್ನು ೨೦೨೬ರ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ನಾಗಲಾಪುರ ಮತ್ತು ಅರಬಿಕೊತ್ತನೂರು ಭಾಗಗಳಲ್ಲಿ ಕಾರ್ಯನಿರ್ವಹಿಸದ ಬೀದಿ ದೀಪಗಳನ್ನು ತಕ್ಷಣವೇ ದುರಸ್ತಿಗೊಳಿಸಿ ರಾತ್ರಿ ವೇಳೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಯಿತು. ಅಪಘಾತಕ್ಕೀಡಾದವರಿಗೆ ಮೊದಲ ೪೮ ಗಂಟೆಗಳ ಕಾಲ 'ಮುಖ್ಯಮಂತ್ರಿಗಳ ಸಾಂತ್ವನ ಯೋಜನಾ' ಅಡಿಯಲ್ಲಿ ೧ ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಬಲಪಡಿಸಲು ಸೂಚಿಸಲಾಯಿತು.
ಜಿಲ್ಲೆಯಲ್ಲಿ ಸದ್ಯ ೨೦ ಸಂಖ್ಯೆಯ '೧೦೮ ಆಂಬ್ಯುಲೆನ್ಸ್'ಗಳು ಹಾಗೂ ೨೬ ಆಸ್ಪತ್ರೆ ಆಧಾರಿತ ಆಂಬ್ಯುಲೆನ್ಸ್ ಸಂವಹನ ಜಾಲ ಸಕ್ರಿಯವಾಗಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಕ್ಯಾಮರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಕಣ್ಣಿಡುವುದು ಮತ್ತು ಶಾಲಾ ಮಕ್ಕಳು ಹಾಗೂ ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸಲು ಸಾರಿಗೆ ಇಲಾಖೆಗೆ ಸೂಚಿಸಲಾಯಿತು.
ರಸ್ತೆ ಸುರಕ್ಷತೆಯು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಸಾರ್ವಜನಿಕರು ಕೂಡ ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಧರಿಸುವುದು ಮತ್ತು ವೇಗದ ಮಿತಿಯನ್ನು ಪಾಲಿಸುವ ಮೂಲಕ ಸಹಕರಿಸಬೇಕು. ಪ್ರಮುಖ ರಸ್ತೆಗಳಲ್ಲಿ ಸ್ಪೀಡ್ ಬ್ರೇಕರ್, ಕ್ಯಾಮೆರಾಗಳನ್ನು ಅಳವಡಿಸಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ರಸ್ತೆ ಸುರಕ್ಷತೆ, ಇಲಾಖೆಗೆ ಸಂಬ0ಧಿಸಿದ0ತೆ ಜನರಿಗೆ ಸಿಗುವ ಸೇವೆಗಳ ಕುರಿತು ಮಾಹಿತಿಯನ್ನು ಸಾರ್ವಜನಿಕರಿಗೆ ಮುಟ್ಟಿಸಲು ‘ಸಾರಿಗೆ ಅದಾಲತ್’ ನ್ನು ಇದೇ ಏಪ್ರಿಲ್ ತಿಂಗಳಿನಲ್ಲಿ ನಡೆಸಬೇಕು ಎಂದು ಆರ್ಟಿಒ ಅವರಿಗೆ ಸೂಚಿಸಿದರು ಎಂದು ಕರೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವಿಶಂಕರ್, ಕೆಜಿಎಫ್ ಪೊಲೀಸ್ ವರಿಷ್ಟಾಧಿಕಾರಿ ಶಿವಂಷು ರಜಪೂತ, ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀನಿವಾಸ್, ಜಿಲ್ಲಾ ಸರ್ಜನ್ ಡಾ. ಜಗದೀಶ್, ನಗರಸಭೆ ಆಯುಕ್ತರಾದ ನವೀನ್ ಚಂದ್ರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಅಲ್ಮಾಸ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರಾಮಮೂರ್ತಿ, ಜಿಲ್ಲೆಗೆ ಸಂಬ0ದಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್