
ಗದಗ, 09 ಮಾರ್ಚ್ (ಹಿ.ಸ.)
ಆ್ಯಂಕರ್:- ರೋಗಿಗಳ ಜೀವ ರಕ್ಷಣೆಗಾಗಿ ಬಳಸಬೇಕಾದ ಆ್ಯಂಬುಲೆನ್ಸ್ ವಾಹನವನ್ನು ಸಾರ್ವಜನಿಕರ ಸಾಗಾಟಕ್ಕೆ ಬಳಸಲಾಗುತ್ತಿದೆ ಎಂಬ ಆರೋಪ ಗದಗ ನಗರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆ್ಯಂಬುಲೆನ್ಸ್ನಲ್ಲಿ ಜನರನ್ನು ಕುರಿಗಳಂತೆ ತುಂಬಿಕೊಂಡು ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಗದಗ ನಗರದ ಜಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಈ ಘಟನೆ ನಡೆದಿರುವುದು ವಿಡಿಯೋದಲ್ಲಿ ಕಾಣಿಸುತ್ತಿದ್ದು, ಆ್ಯಂಬುಲೆನ್ಸ್ ವಾಹನ ಬಂದು ನಿಲ್ಲುತ್ತಿದ್ದಂತೆಯೇ ಹಲವರು ಮುಗಿಬಿದ್ದು ಅದರಲ್ಲಿ ಏರಿ ಕುಳಿತುಕೊಳ್ಳುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಕೆಲವರು ನಿಂತುಕೊಂಡೇ ಪ್ರಯಾಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತುರ್ತು ಸೇವೆಗೆ ಬಳಸಬೇಕಾದ ಆ್ಯಂಬುಲೆನ್ಸ್ ಅನ್ನು ಸಾರಿಗೆ ವಾಹನದಂತೆ ಬಳಸುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಸಾಮಾನ್ಯವಾಗಿ ಆ್ಯಂಬುಲೆನ್ಸ್ ವಾಹನವನ್ನು ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಅಥವಾ ಬೇರೆ ಆಸ್ಪತ್ರೆಗೆ ವರ್ಗಾಯಿಸಲು ಬಳಸಲಾಗುತ್ತದೆ. ಜೀವ-ಸಾವಿನ ನಡುವೆ ಹೋರಾಡುತ್ತಿರುವ ರೋಗಿಗಳಿಗೆ ವೇಗವಾಗಿ ಚಿಕಿತ್ಸೆ ದೊರಕಿಸುವ ಉದ್ದೇಶದಿಂದ ಆ್ಯಂಬುಲೆನ್ಸ್ಗಳಿಗೆ ಟ್ರಾಫಿಕ್ನಲ್ಲೂ ವಿಶೇಷ ಆದ್ಯತೆ ನೀಡಲಾಗುತ್ತದೆ. ಆದರೆ ಇಂತಹ ಮಹತ್ವದ ಸೇವೆಗೆ ಮೀಸಲಾದ ವಾಹನದಲ್ಲೇ ಜನರನ್ನು ಸಾಗಿಸಲಾಗುತ್ತಿರುವುದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ಕೇಳಿಬರುತ್ತಿವೆ.
ವಿಡಿಯೋದಲ್ಲಿ ಕಾಣುವಂತೆ, ಆ್ಯಂಬುಲೆನ್ಸ್ ಗದಗ ನಗರದತ್ತ ಬಂದು ನಿಲ್ಲುತ್ತಿದ್ದಂತೆಯೇ ಹಲವರು ಅದರೊಳಗೆ ಏರಿ ಕುಳಿತುಕೊಳ್ಳುತ್ತಾರೆ. ಕೆಲವರು ವಾಹನದ ಒಳಭಾಗದಲ್ಲೇ ನಿಂತುಕೊಂಡು ಪ್ರಯಾಣ ಮಾಡುತ್ತಿರುವುದು ಕೂಡ ಕಾಣಿಸಿಕೊಂಡಿದ್ದು, ಜನರನ್ನು ಅತಿಯಾಗಿ ತುಂಬಿಕೊಂಡು ಸಾಗಿಸುವ ದೃಶ್ಯಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ನಿಯಮಾನುಸಾರ ಆ್ಯಂಬುಲೆನ್ಸ್ನಲ್ಲಿ ರೋಗಿಯ ಜೊತೆಗೆ ಅಗತ್ಯವಿರುವ ಸಂಬಂಧಿಕರು ಅಥವಾ ವೈದ್ಯಕೀಯ ಸಿಬ್ಬಂದಿ ಮಾತ್ರ ಪ್ರಯಾಣಿಸಲು ಅವಕಾಶವಿದ್ದು, ಸಾರ್ವಜನಿಕರನ್ನು ಸಾಗಿಸಲು ಅವಕಾಶವಿಲ್ಲ. ಆದರೂ ಇಲ್ಲಿ ನಿತ್ಯವೂ ಇದೇ ರೀತಿಯಲ್ಲಿ ಜನರನ್ನು ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಗದಗ ನಿವಾಸಿ ವಿಜಯಲಕ್ಷ್ಮಿ ಅವರು, “ರೋಗಿಗಳಿಗಾಗಿ ಇರುವ ಆ್ಯಂಬುಲೆನ್ಸ್ ಅನ್ನು ಜನರ ಸಾರಿಗೆ ವಾಹನದಂತೆ ಬಳಸುತ್ತಿರುವುದು ಸರಿಯಲ್ಲ. ನಿಜವಾದ ತುರ್ತು ಪರಿಸ್ಥಿತಿಯಲ್ಲಿ ಆ್ಯಂಬುಲೆನ್ಸ್ ಬೇಕಾದಾಗ ಅದು ಲಭ್ಯವಾಗದ ಪರಿಸ್ಥಿತಿ ನಿರ್ಮಾಣವಾಗಬಹುದು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಈ ಕುರಿತು ಸ್ಪಷ್ಟನೆ ನೀಡಿರುವ ಗದಗ ಜಿಮ್ಸ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಬಸವರಾಜ್ ಬೊಮ್ಮನಹಳ್ಳಿ ಅವರು, “ನಮ್ಮ ಜಿಮ್ಸ್ ಆಸ್ಪತ್ರೆಗೆ ಹಲವು ಆ್ಯಂಬುಲೆನ್ಸ್ ವಾಹನಗಳು ಬರುತ್ತವೆ. ಆದರೆ ವಿಡಿಯೋದಲ್ಲಿ ಕಾಣುತ್ತಿರುವ ವಾಹನ ನಮ್ಮ ಜಿಮ್ಸ್ ಆಸ್ಪತ್ರೆಯ ಆ್ಯಂಬುಲೆನ್ಸ್ ಅಲ್ಲ” ಎಂದು ತಿಳಿಸಿದ್ದಾರೆ.
ಅದೇ ವೇಳೆ ಗದಗ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಸ್. ನಿಲಗುಂದ ಅವರು ಮಾತನಾಡಿ, “ವಿಡಿಯೋದಲ್ಲಿ ಕಾಣುತ್ತಿರುವ ಆ್ಯಂಬುಲೆನ್ಸ್ ಸರ್ಕಾರಕ್ಕೆ ಸೇರಿದ ವಾಹನವಾಗಿರಬಹುದು. ಆದರೆ ಅದು ಜಿಲ್ಲಾ ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್ ಅಲ್ಲ. ಈ ಬಗ್ಗೆ ನಾವು ಕೂಡ ಪರಿಶೀಲನೆ ನಡೆಸುತ್ತಿದ್ದೇವೆ.
ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಆ್ಯಂಬುಲೆನ್ಸ್ ಯಾವ ಇಲಾಖೆಗೆ ಸೇರಿದೆ ಎಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.
ಇನ್ನೂ ಜಿಮ್ಸ್ ಆಸ್ಪತ್ರೆಯಿಂದ ಗದಗ ನಗರಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಜನರು ವಿವಿಧ ವಾಹನಗಳನ್ನೇ ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಕಾರಣದಿಂದಲೇ ಕೆಲವರು ಆ್ಯಂಬುಲೆನ್ಸ್ ವಾಹನವನ್ನು ಪ್ರಯಾಣಕ್ಕಾಗಿ ಬಳಸುತ್ತಿರುವ ಸಾಧ್ಯತೆ ಇರುವುದಾಗಿ ಶಂಕೆ ವ್ಯಕ್ತವಾಗುತ್ತಿದೆ.
ಒಟ್ಟಿನಲ್ಲಿ ರೋಗಿಗಳ ಜೀವ ಉಳಿಸಲು ಮೀಸಲಾದ ಆ್ಯಂಬುಲೆನ್ಸ್ ವಾಹನವನ್ನು ಸಾರ್ವಜನಿಕರ ಸಾಗಾಟಕ್ಕೆ ಬಳಸಲಾಗುತ್ತಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದ್ದು, ಈ ವಾಹನ ಯಾವ ಇಲಾಖೆಗೆ ಸೇರಿದೆ ಎಂಬುದು ಪತ್ತೆಯಾದ ಬಳಿಕವೇ ಪ್ರಕರಣದ ನಿಜಾಂಶ ಬಹಿರಂಗವಾಗಬೇಕಿದೆ. ಸರ್ಕಾರದ ತುರ್ತು ಸೇವೆಯಾದ ಆ್ಯಂಬುಲೆನ್ಸ್ ದುರ್ಬಳಕೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP