
ಗದಗ, 09 ಮಾರ್ಚ್ (ಹಿ.ಸ.)
ಆ್ಯಂಕರ್: ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತ್ಯೋತ್ಸವವನ್ನು ತಾಲೂಕು ವೀರಮಾಹೇಶ್ವರ ಜಂಗಮಾಭಿವೃದ್ಧಿ ಸಂಘದ ವತಿಯಿಂದ ಭಕ್ತಿ, ಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಸಮಾಜದ ನೂರಾರು ಭಕ್ತರು ಮತ್ತು ಮುಖಂಡರು ಭಾಗವಹಿಸಿ ಜಯಂತ್ಯೋತ್ಸವಕ್ಕೆ ವಿಶೇಷ ಮೆರುಗು ತಂದರು. ಜಯಂತ್ಯೋತ್ಸವದ ಅಂಗವಾಗಿ ಬೆಳಿಗ್ಗೆ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತಿಭಾವದ ವಾತಾವರಣ ಸೃಷ್ಟಿಸಿತು. ಮೆರವಣಿಗೆಯಲ್ಲಿ ಸುಮಂಗಲೆಯರು ಕುಂಭಕಳಸ ಹೊತ್ತು ಸಾಗಿದ ದೃಶ್ಯ ಎಲ್ಲರ ಗಮನ ಸೆಳೆಯಿತು.
ಮೆರವಣಿಗೆಯಲ್ಲಿ ವೀರಗಾಸೆ, ಜಾಂಜ್ ಮೇಳ ಹಾಗೂ ಚಂಡೆ ವಾದ್ಯ ತಂಡಗಳು ಭಾಗವಹಿಸಿ ಸಾಂಪ್ರದಾಯಿಕ ಕಲೆಯ ಸೊಬಗನ್ನು ಹೆಚ್ಚಿಸಿವೆ. ವಿವಿಧ ವಾದ್ಯಗಳ ನಾದಕ್ಕೆ ಭಕ್ತರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಪಟ್ಟಣದ ವಿವಿಧ ಭಾಗಗಳಲ್ಲಿ ಭಕ್ತರು ಮೆರವಣಿಗೆಯನ್ನು ಸ್ವಾಗತಿಸಿ ಪುಷ್ಪವೃಷ್ಠಿ ಮಾಡಿ ಗೌರವಿಸಿದರು.
ನಂತರ ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಧರ್ಮಸಭೆ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು ಆಶೀರ್ವಚನ ನೀಡಿ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧರ್ಮ, ನೀತಿ ಹಾಗೂ ಸತ್ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಮಾಜದ ಜನರಿಗೆ ಕರೆ ನೀಡಿದರು. ಸಮಾಜದ ಏಕತೆ ಹಾಗೂ ಸೌಹಾರ್ದತೆ ಉಳಿಸುವಲ್ಲಿ ರೇಣುಕಾಚಾರ್ಯರ ತತ್ವಗಳು ಮಹತ್ವದ್ದಾಗಿವೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಆಶೀರ್ವಚನ ನೀಡಿದರು. ಜೊತೆಗೆ ಬನ್ನಿಕೊಪ್ಪ, ವಿರುಪಾಪುರ, ಹಂಪಸಾಗರ ಹಾಗೂ ಹಿರೇವಡ್ಡಟ್ಟಿ ಮಠಗಳ ಸ್ವಾಮೀಜಿಗಳು ಭಾಗವಹಿಸಿ ಸಮಾಜದ ಅಭಿವೃದ್ಧಿಗೆ ಧಾರ್ಮಿಕ ಮೌಲ್ಯಗಳ ಅಗತ್ಯವನ್ನು ಒತ್ತಿಹೇಳಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಆನಂದಸ್ವಾಮಿ ಗಡ್ಡದ್ದೇವರಮಠ, ಬಿಜೆಪಿ ಮುಖಂಡ ಕುಮಾರಸ್ವಾಮಿ ಹಿರೇಮಠ, ತಾಲೂಕು ಜಂಗಮ ಸಮಾಜದ ಅಧ್ಯಕ್ಷ ವಿ.ಜೆ. ಹಿರೇಮಠ, ಯುವ ಘಟಕದ ಅಧ್ಯಕ್ಷ ವಿನಾಯಕ ಗಂಧದ ಸೇರಿದಂತೆ ಸಮಾಜದ ಅನೇಕ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಜಂಗಮ ಸಮಾಜದ ಸದಸ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಯಂತ್ಯೋತ್ಸವವನ್ನು ಯಶಸ್ವಿಗೊಳಿಸಿದರು. ಧಾರ್ಮಿಕ ಭಾವನೆಗಳೊಂದಿಗೆ ನಡೆದ ಈ ಕಾರ್ಯಕ್ರಮ ಮುಂಡರಗಿ ಪಟ್ಟಣದಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಿತು.
---------------
ಹಿಂದೂಸ್ತಾನ್ ಸಮಾಚಾರ್ / lalita MP