
ಬೆಂಗಳೂರು, 09 ಮಾರ್ಚ್ (ಹಿ.ಸ.):
ಆ್ಯಂಕರ್:
ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಕೆಯನ್ನು ಸಮರ್ಪಕವಾಗಿ ಮಾಡಲು ಸರ್ಕಾರ ಸಾಕಷ್ಟು ಅನುದಾನ ಒದಗಿಸಿದ್ದು, ಖರೀದಿ ಮತ್ತು ವಿತರಣಾ ವ್ಯವಸ್ಥೆಯನ್ನು ಪಾರದರ್ಶಕವಾಗಿ ರೂಪಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ರಾಜ್ಯ ವೈದ್ಯಕೀಯ ಸರಕುಗಳ ನಿಗಮ ಮುಖಾಂತರ ಕಳೆದ ಆಗಸ್ಟ್‌ನಲ್ಲಿಯೇ ಔಷಧ ಖರೀದಿ ಪಟ್ಟಿಯನ್ನು ಸಿದ್ಧಪಡಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಹಿಂದಿನ ಅವಧಿಯಲ್ಲಿ ಅನೇಕ ಔಷಧಗಳು ಸರಿಯಾದ ತಪಾಸಣೆ ಇಲ್ಲದೆ ವಿತರಣೆ ಆಗುತ್ತಿದ್ದವು. ಕೆಲವೊಮ್ಮೆ ಕಡಿಮೆ ಬಳಕೆಯ ಔಷಧಗಳನ್ನು ಹೆಚ್ಚು ಪ್ರಮಾಣದಲ್ಲಿ ಖರೀದಿ ಮಾಡಲಾಗುತ್ತಿತ್ತು. ಈಗ ಅಗತ್ಯವಿರುವ ಔಷಧಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಅವರು ವಿವರಿಸಿದರು.
ಇದರ ಭಾಗವಾಗಿ ವಿವಿಧ ರಾಜ್ಯಗಳ ಮಾದರಿಗಳನ್ನು ಅಧ್ಯಯನ ಮಾಡಲಾಗಿದೆ. ವಿಶೇಷವಾಗಿ ತಮಿಳುನಾಡಿನಲ್ಲಿ ಇರುವ ಅಚ್ಚುಕಟ್ಟಾದ ಖರೀದಿ ವಿಧಾನವನ್ನು ಪರಿಗಣಿಸಲಾಗಿದೆ. ಹಿಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಅನವಶ್ಯಕ ನಿಯಮಗಳು ಇದ್ದುದರಿಂದ ಹೆಚ್ಚು ಬಿಡ್‌ದಾರರು ಭಾಗವಹಿಸುವ ಅವಕಾಶ ಇರಲಿಲ್ಲ. ಈಗ ಯಾವ ಔಷಧಕ್ಕೆ ಎಷ್ಟು ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಿ ಪಾರದರ್ಶಕ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಖರೀದಿಸಿದ ಔಷಧಗಳನ್ನು ಉಗ್ರಾಣದಲ್ಲಿ ಮತ್ತೊಮ್ಮೆ ಪರೀಕ್ಷಿಸಿ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವ ಕ್ರಮ ಜಾರಿಗೆ ತಂದಿರುವುದರಿಂದ ಕೆಲವೊಂದು ವಿಳಂಬ ಉಂಟಾಗಿದೆ. ಆದರೆ ಇದರಿಂದ ಉತ್ತಮ ಗುಣಮಟ್ಟದ ಔಷಧ ಪೂರೈಕೆ ಸಾಧ್ಯವಾಗಲಿದೆ ಎಂದು ಸಚಿವರು ಹೇಳಿದರು.
ಎ ಬಿ ಆರ್ ಕೆ ಯೋಜನೆಯಡಿ ಎಲ್ಲಾ ಜಿಲ್ಲೆಗಳಲ್ಲಿ ಸುಮಾರು 300 ಕೋಟಿ ರೂ. ನಿಧಿ ಲಭ್ಯವಿದ್ದು, ಹೆಚ್ಚುವರಿಯಾಗಿ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಸ್ಥಳೀಯ ಮಟ್ಟದಲ್ಲಿಯೂ ಔಷಧ ಖರೀದಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇದಲ್ಲದೆ ಕೆಎಂಸಿಎಲ್ ಸಂಸ್ಥೆಯ ವ್ಯವಸ್ಥೆಯನ್ನು ಬಲಪಡಿಸಲು ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಹಿಂದಿನಂತೆ ವರ್ಷಕ್ಕೊಮ್ಮೆ ಔಷಧ ಪೂರೈಕೆ ಮಾಡುವ ಬದಲು ಈಗ ಪ್ರತಿ ಮೂರು ತಿಂಗಳಿಗೊಮ್ಮೆ ಅಗತ್ಯದಂತೆ ಔಷಧ ಪೂರೈಕೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಔಷಧಗಳು ಅವಧಿ ಮೀರಿಸಿ ವ್ಯರ್ಥವಾಗುವ ಸಮಸ್ಯೆ ಕಡಿಮೆಯಾಗಲಿದೆ ಎಂದು ಹೇಳಿದರು.
ಜನರಿಗೆ ಉಚಿತವಾಗಿ ಔಷಧ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕ್ರಮಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa