ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭ
ಗದಗ, 09 ಮಾರ್ಚ್ (ಹಿ.ಸ.) ಆ್ಯಂಕರ್:- ಗದಗ ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಅಧೀನದಲ್ಲಿರುವ ಶ್ರೀಮತಿ ಎಸ್.ಪಿ. ಹುಯಿಲಗೋಳ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿನಿಯರು ಮುಂಬರುವ
ಫೋಟೋ


ಗದಗ, 09 ಮಾರ್ಚ್ (ಹಿ.ಸ.)

ಆ್ಯಂಕರ್:- ಗದಗ ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಅಧೀನದಲ್ಲಿರುವ ಶ್ರೀಮತಿ ಎಸ್.ಪಿ. ಹುಯಿಲಗೋಳ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿನಿಯರು ಮುಂಬರುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲಿ ಎಂಬ ಉದ್ದೇಶದಿಂದ ವಿಶೇಷ ಪೂಜೆ ಮತ್ತು ಆಶೀರ್ವಚನ ಕಾರ್ಯಕ್ರಮವೂ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಸಂಸ್ಕೃತ ಶಿಕ್ಷಕರಾದ ರಘೋತ್ತಮ ನಿಲೂಗಲ್ಲ ಅವರು ವಿದ್ಯಾದೇವತೆ ಮಹಾ ಸರಸ್ವತಿ ಹಾಗೂ ಸಿದ್ಧಿವಿನಾಯಕನ ಪೂಜೆ ನೆರವೇರಿಸಿದರು. ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲಿ ಎಂಬ ಸಂಕಲ್ಪದೊಂದಿಗೆ ಪೂಜೆ ನಡೆಸಿ, ವಿದ್ಯಾರ್ಥಿನಿಯರ ಶೈಕ್ಷಣಿಕ ಯಶಸ್ಸಿಗಾಗಿ ಪ್ರಾರ್ಥಿಸಲಾಯಿತು.

ಈ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಆರ್.ಆರ್. ಜಾಲಿಹಾಳ, ವಿದ್ಯಾದಾನ ಸಮಿತಿಯ ಸಿಇಒ ಪಿ.ಎಚ್. ಕಡಿವಾಲ, ಶಾಲೆಯ ಮುಖ್ಯೋಪಾಧ್ಯಾಯಿನಿ ಆರ್.ಎಂ. ಪಟ್ಟಣಶೆಟ್ಟಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ನಿವೃತ್ತ ಶಿಕ್ಷಕ ಆರ್.ಆರ್. ಜಾಲಿಹಾಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾದಾನ ಸಮಿತಿಯ ಸಿಇಒ ಪಿ.ಎಚ್. ಕಡಿವಾಲ ಅವರು, “ಕನ್ನಡ ಪಂಡಿತರಾಗಿರುವ ಹಾಗೂ ದಕ್ಷ ಆಡಳಿತಗಾರರಾಗಿರುವ ಆರ್.ಆರ್. ಜಾಲಿಹಾಳ ಅವರು ಶಿಕ್ಷಕರಿಗೆ ಮಾತ್ರವಲ್ಲ, ವಿದ್ಯಾರ್ಥಿಗಳಿಗೆ ಸಹ ಮಾದರಿಯಾಗಿದ್ದಾರೆ. ಅವರಲ್ಲಿರುವ ವಿಷಯ ಪಾಂಡಿತ್ಯ ಮತ್ತು ಶಿಸ್ತು ಪ್ರತಿಯೊಬ್ಬ ವಿದ್ಯಾರ್ಥಿಯೂ ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು” ಎಂದು ಹೇಳಿದರು. ಮುಂಬರುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಶ್ರಮಪಟ್ಟು ಉತ್ತಮ ಫಲಿತಾಂಶ ಗಳಿಸಬೇಕು ಎಂದು ಶುಭ ಹಾರೈಸಿದರು.

ಜೊತೆಗೆ ಜಾಲಿಹಾಳರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಆರ್.ಆರ್. ಜಾಲಿಹಾಳ ಅವರು, “ವಿದ್ಯಾದಾನ ಸಮಿತಿಯಲ್ಲಿ ಶಿಕ್ಷಕ ವೃತ್ತಿ ನಿರ್ವಹಿಸುವ ಅವಕಾಶ ದೊರೆತಿರುವುದು ನನ್ನ ಪೂರ್ವಜನ್ಮದ ಪುಣ್ಯ. ಈ ಸಮಿತಿಯ ಸಂಸ್ಥಾಪಕರು ಹಾಗೂ ಆಡಳಿತ ಮಂಡಳಿ ಶಿಕ್ಷಕರಿಗೆ ನೀಡಿದ ಗೌರವ ಮತ್ತು ಪ್ರೋತ್ಸಾಹದಿಂದ ಅನೇಕರು ಉತ್ತಮ ಶಿಕ್ಷಕರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ” ಎಂದು ಹೇಳಿದರು.

ವಿದ್ಯಾದಾನ ಸಮಿತಿ ನಮ್ಮಂತಹ ಹಲವಾರು ಶಿಕ್ಷಕರಿಗೆ ಗೌರವಾನ್ವಿತವಾದ ‘ಗುರು’ ಸ್ಥಾನವನ್ನು ನೀಡಿದೆ. ಈ ಸಂಸ್ಥೆ ನಮಗೆಲ್ಲ ದಾರಿ ದೀಪವಾಗಿದ್ದು, ಇದರ ನೆರಳಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಬೇಕು ಎಂದು ಅವರು ಹೇಳಿದರು. ವಿದ್ಯಾರ್ಥಿನಿಯರು ಶ್ರಮವಹಿಸಿ ಅಧ್ಯಯನ ಮಾಡಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಬೇಕು ಎಂದು ಹಿತವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯಿನಿ ಆರ್.ಎಂ. ಪಟ್ಟಣಶೆಟ್ಟಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಜಾಲಿಹಾಳರ ಸೇವೆಯನ್ನು ಸ್ಮರಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆ ಅಮೂಲ್ಯವಾಗಿದ್ದು, ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದರು. ಜೊತೆಗೆ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯರು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿ ಶಾಲೆಗೆ ಕೀರ್ತಿ ತರಬೇಕು ಎಂದು ಪ್ರೋತ್ಸಾಹಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿ ನಿವೃತ್ತ ಶಿಕ್ಷಕರಿಗೆ ಗೌರವ ಸಲ್ಲಿಸಿದರು.

ಕೊನೆಯಲ್ಲಿ ವಿದ್ಯಾರ್ಥಿನಿಯರು ತಮ್ಮ ಶಾಲಾ ಜೀವನದ ನೆನಪುಗಳನ್ನು ಹಂಚಿಕೊಂಡು, ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು. ಸಮಾರಂಭವು ಭಾವನಾತ್ಮಕ ವಾತಾವರಣದಲ್ಲಿ ನಡೆಯಿತು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande