
ಕೋಲಾರ ಮಾರ್ಚ್ ೯ (ಹಿ.ಸ)
ಆಂಕರ್ : ಯುವಕರಲ್ಲಿ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಆಸಕ್ತಿ ಮೂಡಿದಾಗ ಮಾತ್ರ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯ ಹಾಗೂ ಇದು ಸದೃಢ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಕರುನಾಡ ಜನಪದ ಕಲಾ ಸಂಘದ ಅಧ್ಯಕ್ಷರಾದ ಕಲಾವಿದ ಸುನಿಲ್ ತಿಳಿಸಿದರು.
ಮೈ ಭಾರತ್ ಕೇಂದ್ರ ಕೋಲಾರ, ಜನವಿಕಾಸ ಯುವಜನ ಸೇವಾ ಸಂಸ್ಥೆ, ಕರುನಾಡ ಜಾನಪದ ಇವರ ಸಹಯೋಗದಲ್ಲಿ ಸೋಮವಾರ ಕೋಲಾರ ನಗರದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕೋಲಾರ ಜಿಲ್ಲೆಯ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.
ಕ್ರೀಡೆಗಳು ಕೇವಲ ಸೋಲು-ಗೆಲುವಿನ ಪ್ರದರ್ಶನವಲ್ಲ, ಅವು ಯುವಜನರಲ್ಲಿ ಶಿಸ್ತು, ಏಕಾಗ್ರತೆ ಮತ್ತು ತಂಡದ ಮನೋಭಾವವನ್ನು ಬೆಳೆಸುತ್ತವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಕ್ರೀಡಾ ಚಟುವಟಿಕೆಗಳು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಯಾವುದಾದರೂ ಒಂದು ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಪ್ರಾಂಶುಪಾಲರಾದ ವಿಕಾಸ್ ಡಿ, ಮೈ ಭಾರತ್ ಕೇಂದ್ರ ಕೋಲಾರ ಯುವಜನ ಅಧಿಕಾರಿಗಳಾದ ರಾಜೇಶ್ ಕಾರಂತ್, ಜನವಿಕಾಸ ಯೋಜನಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪ್ರವೀಣ್ ಕುಮಾರ್.ಎಸ್, ದೈಹಿಕ ಶಿಕ್ಷಕರಾದ ರಾಜೇಶ್ ಕುಮಾರ್, ಚಂದ್ರಶೇಖರ್, ಕುಶಾಲ್ ಕುಮಾರ್, ಅಭಿಲಾಶ್ ಮುಂತಾದವರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್