
ಗದಗ, 08 ಮಾರ್ಚ್ (ಹಿ.ಸ.)
ಆ್ಯಂಕರ್: ಸನಾತನ ಧರ್ಮವು ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಲ್ಲದೆ ಈ ಭೂಮಿಯ ಮೇಲಿರುವ ಪ್ರತಿಯೊಬ್ಬರಿಗೂ ಮಾನವೀಯ ಮೌಲ್ಯಗಳನ್ನು ಸಾರುವ ಮಹತ್ವದ ಧರ್ಮವಾಗಿದೆ. ಆದರೆ ಇಂತಹ ಸನಾತನ ಧರ್ಮವನ್ನು ನಾಶ ಮಾಡಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡ ಹೇಳಿದರು.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಶಾಖಾಂಬರಿ ಸಮುದಾಯ ಭವನದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಇಂದಿನ ಸಮಾಜದಲ್ಲಿ ಹಿಂದೂ ಸಮುದಾಯದ ಮೇಲೆ ವಿವಿಧ ರೀತಿಯ ಆಘಾತಗಳು ನಡೆಯುತ್ತಿವೆ. ಗೋಹತ್ಯೆ, ದೇವರ ವಿಡಂಬನೆ, ಧರ್ಮದ ಅಪಮಾನ, ಅತ್ಯಾಚಾರ ಹಾಗೂ ಹಲ್ಲೆಗಳಂತಹ ಘಟನೆಗಳು ಸಮಾಜದಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂತಹ ಘಟನೆಗಳ ವಿರುದ್ಧ ಸಮಾಜ ಜಾಗೃತಿಯಾಗಬೇಕು ಮತ್ತು ಧರ್ಮದ ರಕ್ಷಣೆಗೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿ ಕಳೆದ 23 ವರ್ಷಗಳಿಂದ ದೇಶದಾದ್ಯಂತ ಧರ್ಮಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಸಮಾಜದಲ್ಲಿ ರಾಷ್ಟ್ರಭಕ್ತಿ ಹಾಗೂ ಧರ್ಮಭಾವನೆ ಬೆಳೆಸುವ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರದ ಮೇಲೆ ಭಗವಾ ಧ್ವಜಾರೋಹಣವಾದ ನಂತರ ದೇಶದಲ್ಲಿ ಹೊಸ ಯುಗದ ಆರಂಭವಾಗಿದೆ. ಇದು ಹಿಂದೂ ರಾಷ್ಟ್ರ ಸ್ಥಾಪನೆಯ ದಿಕ್ಕಿನಲ್ಲಿ ಒಂದು ಪ್ರಮುಖ ಸಂಕೇತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂಗಳು ಜಾತಿ-ಪಂಥ ಭೇದ ಮರೆತು ಸಂಘಟಿತರಾಗಬೇಕು. ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಧರ್ಮಕಾರ್ಯಗಳಿಗೆ ಮೀಸಲಿಡಬೇಕು. ದೇವಸ್ಥಾನಗಳ ಸರ್ಕಾರಿಕರಣ, ವಕ್ಫ್ ಕಾನೂನಿನ ದುರ್ಬಳಕೆ, ಲವ್ ಜಿಹಾದ್, ಹಲಾಲ್ ಜಿಹಾದ್ ಹಾಗೂ ಬಲವಂತದ ಮತಾಂತರದಂತಹ ವಿಷಯಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ಯುವ ಮುಖಂಡ ಆದೇಶ ಹುಲಗೂರು ಮಾತನಾಡಿ, ಭಾರತದಲ್ಲಿ ಪ್ರಾಚೀನ ಗುರುಕುಲ ಪದ್ಧತಿಯನ್ನು ಪುನಃ ಸ್ಥಾಪಿಸುವ ಅಗತ್ಯವಿದೆ. ಶಿಕ್ಷಣದ ಜೊತೆಗೆ ಸಂಸ್ಕಾರಗಳನ್ನು ನೀಡುವ ವ್ಯವಸ್ಥೆಯಾಗಿ ಗುರುಕುಲ ಪದ್ಧತಿ ಮಹತ್ವದ್ದಾಗಿದ್ದು, ಅದನ್ನು ಪುನರುಜ್ಜೀವನಗೊಳಿಸುವ ಮೂಲಕ ಸಮಾಜದಲ್ಲಿ ಸನಾತನ ಮೌಲ್ಯಗಳನ್ನು ಬಲಪಡಿಸಬಹುದು ಎಂದು ಹೇಳಿದರು.
ಹಿಂದೂ ಸಮಾಜ ಜಾತಿ-ಪಂಥದ ಭೇದವನ್ನು ಮರೆತು ಒಂದಾಗಿ ಬಂದರೆ ಸಮಾಜದ ಮೇಲೆ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಲಕ್ಷ್ಮೀ ತಟ್ಟಿ, ಅಶೋಕ ಭೋಜ, ಶೋಭಾ ಇಟಗಿ, ಶಾಂತಾ ಹುಲಕೋಟಿ, ಪ್ರಕಾಶ ಬೆಟಗೇರಿ, ರಮೇಶ ಬೂದಿಹಾಳ, ಸುರೇಶ ಗೋಧಿ, ಕೃಷ್ಣ ಬಡ್ಡಿ, ನಿಲಾಂಬಿಕಾ ಹಡಪದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸುಮಾ ಕುಂಬಾರ ಹಾಗೂ ಪ್ರವೀಣ ಬೆನ್ನೂರು ನಿರೂಪಿಸಿದರು. ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ್ದ ನೂರಾರು ಹಿಂದೂ ಬಾಂಧವರು ಸಭೆಯಲ್ಲಿ ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP