ಅಕ್ರಮ ಮಣ್ಣು ಗಣಿಗಾರಿಕೆ ಹೊಂಡದಲ್ಲಿ ಮುಳುಗಿ ನರ್ಸಿಂಗ್ ವಿದ್ಯಾರ್ಥಿ ಸಾವು
ಗದಗ, 08 ಮಾರ್ಚ್ (ಹಿ.ಸ.) ಆ್ಯಂಕರ್:- ಅಕ್ರಮ ಮಣ್ಣು ಗಣಿಗಾರಿಕೆಯಿಂದ ನಿರ್ಮಾಣವಾದ ಹೊಂಡದಲ್ಲಿ ಸ್ನಾನಕ್ಕೆ ಇಳಿದ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿಯೊರ್ವ ಮುಳುಗಿ ಮೃತಪಟ್ಟ ದುರ್ಘಟನೆ ಗದಗ ತಾಲೂಕಿನ ಲಕ್ಕುಂಡಿ ಸಮೀಪದ ಕಣಗಿನಾಳ ರಸ್ತೆಯಲ್ಲಿ ಸಂಭವಿಸಿದೆ. ಮೃತ ವಿದ್ಯಾರ್ಥಿಯನ್ನು ಬೆಳಗಾವಿ ಜಿಲ್ಲ
ಫೋಟೋ


ಗದಗ, 08 ಮಾರ್ಚ್ (ಹಿ.ಸ.)

ಆ್ಯಂಕರ್:- ಅಕ್ರಮ ಮಣ್ಣು ಗಣಿಗಾರಿಕೆಯಿಂದ ನಿರ್ಮಾಣವಾದ ಹೊಂಡದಲ್ಲಿ ಸ್ನಾನಕ್ಕೆ ಇಳಿದ ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿಯೊರ್ವ ಮುಳುಗಿ ಮೃತಪಟ್ಟ ದುರ್ಘಟನೆ ಗದಗ ತಾಲೂಕಿನ ಲಕ್ಕುಂಡಿ ಸಮೀಪದ ಕಣಗಿನಾಳ ರಸ್ತೆಯಲ್ಲಿ ಸಂಭವಿಸಿದೆ.

ಮೃತ ವಿದ್ಯಾರ್ಥಿಯನ್ನು ಬೆಳಗಾವಿ ಜಿಲ್ಲೆಯ ಆದಿತ್ಯ ಎಂದು ಗುರುತಿಸಲಾಗಿದೆ. ನರ್ಸಿಂಗ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದು, ಇತ್ತೀಚೆಗೆ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರು ಎಂದು ತಿಳಿದುಬಂದಿದೆ. ಪದವಿ ಮುಗಿಸಿ ಮನೆಗೆ ತೆರಳಬೇಕಿದ್ದ ಸಮಯದಲ್ಲೇ ಈ ದುರ್ಘಟನೆ ಸಂಭವಿಸಿರುವುದು ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ತೀವ್ರ ದುಃಖ ಮೂಡಿಸಿದೆ.

ರಂಗಪಂಚಮಿ ಹಬ್ಬದ ಅಂಗವಾಗಿ ನಿನ್ನೆ ಸ್ನೇಹಿತರೊಂದಿಗೆ ಬಣ್ಣ ಆಡಿ ಬಳಿಕ ಸ್ನಾನ ಮಾಡಲು ಆರೇಳು ಮಂದಿ ಯುವಕರು ಲಕ್ಕುಂಡಿ ಸಮೀಪದ ಅಕ್ರಮ ಮಣ್ಣು ಗಣಿಗಾರಿಕೆ ಹೊಂಡಕ್ಕೆ ತೆರಳಿದ್ದರು. ಈ ವೇಳೆ ನೀರಿಗೆ ಇಳಿದ ಆದಿತ್ಯ ಆಳವಾದ ಹೊಂಡದಲ್ಲಿ ಮುಳುಗಿ ಹೊರಬರಲಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ನಡೆಸಿದರು. ಬಳಿಕ ವಿದ್ಯಾರ್ಥಿಯ ಮೃತದೇಹವನ್ನು ಹೊರತೆಗೆದರು. ಈ ಘಟನೆ ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಈ ನಡುವೆ ಗದಗ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು, ಅದರ ಪರಿಣಾಮವಾಗಿ ಅಪಾಯಕಾರಿಯಾದ ಆಳವಾದ ಹೊಂಡಗಳು ನಿರ್ಮಾಣವಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶ್ಯಾಗೋಟಿ, ಚಿಕ್ಕಹಂದಿಗೋಳ, ಕಳಸಾಪೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಇದೇ ರೀತಿಯ ಹೊಂಡಗಳಲ್ಲಿ ಮಕ್ಕಳು ಹಾಗೂ ಯುವಕರು ಬಿದ್ದು ಮೃತಪಟ್ಟ ಘಟನೆಗಳು ಈ ಹಿಂದೆ ಕೂಡ ನಡೆದಿವೆ ಎಂದು ಲಕ್ಕುಂಡಿ ಗ್ರಾಮಸ್ಥರಾದ ವಿರೂಪಾಕ್ಷ ಹೇಳಿದ್ದಾರೆ.

ಆದರೂ ಅಕ್ರಮ ಮಣ್ಣು ಗಣಿಗಾರಿಕೆಗೆ ಜಿಲ್ಲಾಡಳಿತ ಹಾಗೂ ಗಣಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದರಿಂದ ಇಂತಹ ದುರ್ಘಟನೆಗಳು ಮರುಕಳಿಸುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಾವಿಗೆ ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೇ ಹೊಣೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ಒಬ್ಬನೇ ಮಗನನ್ನು ಕಳೆದುಕೊಂಡು ಆದಿತ್ಯನ ಪೋಷಕರು ಅಳಲಲ್ಲಿ ಮುಳುಗಿದ್ದು, ಪುತ್ರನ ಬಗ್ಗೆ ಅನೇಕ ಕನಸು ಕಂಡಿದ್ದ ಕುಟುಂಬಕ್ಕೆ ಈ ದುರ್ಘಟನೆ ಭಾರೀ ಆಘಾತ ಉಂಟುಮಾಡಿದೆ.

ಘಟನೆ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರೆದಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande