
ಗದಗ, 08 ಮಾರ್ಚ್ (ಹಿ.ಸ.)
ಆ್ಯಂಕರ್: ಭಾರತೀಯ ಸಂಸ್ಕೃತಿಯ ಮೂಲ ಬೇರು ಜನಪದ ಸಂಸ್ಕೃತಿಯಲ್ಲಿದೆ. ಜನಪದರು ತಮ್ಮ ಜೀವನದುದ್ದಕ್ಕೂ ಹಾಡಿ ನಲಿದ ಹಾಡುಗಳು, ಪ್ರದರ್ಶಿಸಿದ ಕಲೆಗಳು ಇಂದಿಗೂ ಜೀವಂತವಾಗಿದ್ದು, ಅವು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗುತ್ತಾ ಬಂದಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ ಎಂದು ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಗದಗ ಜಿಲ್ಲೆ ನರೇಗಲ್ ಪಟ್ಟಣದ ಹಿರೇಮಠದ ಸಭಾಭವನದಲ್ಲಿ ರೋಣದ ಸ್ಪಂದನಾ ಮಹಿಳಾ ಮಂಡಳದವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಜಾನಪದ ಕಲೋತ್ಸವವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಜನಪದ ಸಂಸ್ಕೃತಿ ನಮ್ಮ ಸಮಾಜದ ಜೀವನಾಡಿಯಾಗಿದ್ದು, ಅದು ಗ್ರಾಮೀಣ ಬದುಕಿನ ಪರಂಪರೆ, ಆಚರಣೆ, ನಂಬಿಕೆ ಮತ್ತು ಕಲಾತ್ಮಕ ಅಭಿವ್ಯಕ್ತಿಗಳ ಪ್ರತಿರೂಪವಾಗಿದೆ. ಈ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು, ಇಂತಹ ಕಾರ್ಯಕ್ರಮಗಳ ಮೂಲಕ ಜನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಅವರು ಹೇಳಿದರು.
ಹಿಂದಿನ ಕಾಲದಲ್ಲಿ ಮಹಿಳೆಯ ಜಗತ್ತು ಮನೆಯ ಹೊಸ್ತಿಲೊಳಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದಿನ ಕಾಲದಲ್ಲಿ ಮಹಿಳೆಯರು ಶಿಕ್ಷಣ, ಉದ್ಯೋಗ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪುರುಷರಷ್ಟೇ ಸಮಾನವಾಗಿ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಹಿಳೆಯರಲ್ಲಿರುವ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ರೋಣದ ಸ್ಪಂದನಾ ಮಹಿಳಾ ಮಂಡಳದವರು ಅಧ್ಯಕ್ಷೆ ಶಶಿಕಲಾ ಪಾಟೀಲ ಅವರ ಮುಂದಾಳತ್ವದಲ್ಲಿ ಜಾನಪದ ಕಲೋತ್ಸವವನ್ನು ಆಯೋಜಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಪಂದನಾ ಮಹಿಳಾ ಮಂಡಳದ ಅಧ್ಯಕ್ಷೆ ಶಶಿಕಲಾ ಪಾಟೀಲ ಅವರು, ಮಹಿಳೆಯ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಪ್ರತಿವರ್ಷ ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಮಹಿಳೆಯ ಜಗತ್ತು ಮನೆ, ಗಂಡ, ಮಕ್ಕಳು ಇಷ್ಟಕ್ಕೆ ಮಾತ್ರ ಸೀಮಿತವಲ್ಲ; ಅದರಾಚೆಯೂ ಅವಳು ತನ್ನ ಪ್ರತಿಭೆ ಮತ್ತು ಸಾಮರ್ಥ್ಯವನ್ನು ತೋರಿಸಬಲ್ಲಳು ಎಂಬುದನ್ನು ಸಮಾಜಕ್ಕೆ ತಿಳಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ ಎಂದು ಹೇಳಿದರು.
ಜಾನಪದ ಕಲೋತ್ಸವದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮಹಿಳೆಯರು ಜಾನಪದ ಹಾಡುಗಳನ್ನು ಹಾಡಿ, ನೃತ್ಯ ಪ್ರದರ್ಶಿಸಿ, ಒಡಪುಗಳನ್ನು ಹೇಳುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ನರೇಗಲ್ಲ, ಹಾಲಕೆರೆ, ಅಬ್ಬಿಗೇರಿ, ನಿಡಗುಂದಿ, ಜಕ್ಕಲಿ, ತೋಟಗಂಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದ ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ರತ್ನಮ್ಮ ಧಡೇಸೂರಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜನಪದ ಕಲೆಗಳ ಮಹತ್ವ ಮತ್ತು ಮಹಿಳೆಯರ ಪಾತ್ರದ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಕಸ್ತೂರಿಬಾಯಿ ಧನ್ನೂರ, ರೇಣುಕಾ ವಿಜಯಲಕ್ಷ್ಮಿ ಪೊಲೀಸ್ ಪಾಟೀಲ, ಮಲ್ಲನಗೌಡ ಪಾಟೀಲ, ಎಂ.ಎಸ್. ಪಾಟೀಲ, ಮಂಜುನಾಥ ಪಾಟೀಲ, ದೇಸಾಯಿಗೌಡ್ರ, ಪಿ.ಆರ್. ಹಿರೇಮಠ, ಎಂ.ಎಸ್. ಧಡೇಸೂರಮಠ, ಅಲ್ಲಾಬಕ್ಷಿ ನದಾಫ್, ಮೈಲಾರಪ್ಪ ಚಳ್ಳಮರದ, ಅಂದಪ್ಪ ಧರ್ಮಾಯತ, ನಿಂಗಪ್ಪ ಲಕ್ಕನಗೌಡ್ರ, ಗುಡದಪ್ಪ ಗೋಡಿ, ಶೇಕಪ್ಪ ಜುಟ್ಲದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಾನಪದ ಕಲೋತ್ಸವವು ಮಹಿಳೆಯರ ಪ್ರತಿಭೆಯನ್ನು ಬೆಳಕಿಗೆ ತರುವುದರ ಜೊತೆಗೆ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮಹತ್ವದ ವೇದಿಕೆಯಾಗಿ ಪರಿಣಮಿಸಿತು.
---------------
ಹಿಂದೂಸ್ತಾನ್ ಸಮಾಚಾರ್ / lalita MP