
ಕೋಲಾರ, ೦೮ ಮಾರ್ಚ್ (ಹಿ.ಸ)
ಆಂಕರ್ : ಸಿಪಿಐಎಂ ಪಕ್ಷದ ತಾಲೂಕು ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ (ಕೆ.ಪಿ.ಆರ್.ಎಸ್) ಜಿಲ್ಲಾ ಅಧ್ಯಕ್ಷ ಟಿ.ಎಂ.ವೆAಕಟೇಶ್ (೫೪) ಶನಿವಾರ ಮಧ್ಯರಾತ್ರಿ ತಾಲ್ಲೂಕಿನ ಮುದುವಾಡಿ ಕೆರೆ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತರಾದರು. ಈ ದುರ್ಘಟನೆಯಿಂದ ಇಡೀ ಪ್ರಾಂತ ರೈತ ಸಂಘ ಹಾಗೂ ಇತರ ಜನಪರ ಸಂಘಟನೆಯಗಳ ಮುಖಂಡರು ಮತ್ತು ಕಾರ್ಯಕರ್ತರಿಗೆ ಆಘಾತವಾಗಿದೆ.
ಸೋಮವಾರ ಕೋಲಾರ ನಗರದಲ್ಲಿ ಕೆ.ಪಿ.ಆರ್.ಎಸ್ ರಾಜ್ಯ ಸಮ್ಮೇಳನ ಆರಂಭವಾಗಲಿರುವ ಕಾರಣ ಶನಿವಾರ ಬ್ಯಾನರ್, ಬಂಟಿAಗ್ಸ್ ಕಟ್ಟಿ ಮಧ್ಯರಾತ್ರಿ ೧೨.೪೫ರ ಸುಮಾರಿಗೆ ಸ್ವಗ್ರಾಮ ತುರಾಂಡಹಳ್ಳಿಗೆ ತೆರಳುವಾಗ ಅವರಿದ್ದ ಇಂಡಿಕಾ ಕಾರು ನಿಯಂತ್ರಣ ತಪ್ಪಿ ಮುದುವಾಡಿ ಕೆರೆಗೆ ಬಿದ್ದಿರುವ ಸಂಭವವಿದೆ ಇದೆ. ನಡುರಾತ್ರಿ ಅಪಘಾತ ಸಂಭವಿಸಿದ ಕಾರಣ ಪ್ರತ್ಯೇಕವಾಗಿ ಅಪಘಾತವನ್ನು ಯಾರೂ ಕಂಡಿಲ್ಲ.
ಭಾನುವಾರ ಬೆಳಿಗ್ಗೆ ೯ ಗಂಟೆ ಸುಮಾರಿಗೆ ಅಪಘಾತದ ಸುದ್ಧಿ ತಿಳಿಯಿತು. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದಾಗ ಕೆರೆಯಲ್ಲಿ ಕಾರು ಹಾಗೂ ವೆಂಕಟೇಶ್ ಶವ ಇರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಕೋಲಾರ ಶ್ರೀನಿವಾಸಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮುದುವಾಡಿ ಕೆರೆಯ ದಂಡೆಯ ಮೇಲೆ ಸೇತುವೆ ನಿರ್ಮಾಣ ಮಾಡಲಾಗಿದೆ. ಸೇತುವೆ ನಿರ್ಮಾಣವಾದ ನಂತರ ಹಳೆಯ ಸೇತುವೆಯನ್ನು ಇದುವರೆಗೂ ಮುಚ್ಚಿಲ್ಲ. ರಾತ್ರಿ ರಸ್ತೆಯನ್ನು ಸರಿಯಾಗಿ ಗುರ್ತಿಸದೆ ನೇರವಾಗಿ ಕೆರೆಗೆ ಕಾರು ಹೋಗಿರುವ ಸಂಭವವಿದೆ.
ಭಾನುವಾರ ಮಧ್ಯಾಹ್ನ ೩.೩೦ ತನಕ ನಗರದ ಪಾಲಸಂದ್ರ ಲೇಔಟ್ ಸಂಘದ ಕಛೇರಿಯಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು ಸಂಜೆ ೬ ಗಂಟೆಗೆ ಸ್ವಗ್ರಾಮ ತುರಾಂಡಹಳ್ಳಿಯಲ್ಲಿ ವೆಂಕಟೇಶ್ ಅವರ ಅಂತ್ಯಕ್ರಿಯೆ ನಡೆಯಿತು. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ವೆಂಕಟೇಶ್ ನಿಧನಕ್ಕೆ ಸಿಪಿಎಂ ಕೋಲಾರ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ಮಾಜಿ ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್ ವರಲಕ್ಷ್ಮೀ, ಕೆ.ಪಿ.ಆರ್.ಎಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಹಾಗೂ ಜನಪರ ಚಳುವಳಿಯ ಮುಖಂಡರು ಅಂತಿಮ ದರ್ಶನ ಪಡೆದರು.
ಮೂರು ದಿನ ರಾಜ್ಯ ಸಮ್ಮೇಳನ ಕೋಲಾರದಲ್ಲಿ ಸೋಮವಾರ ಆರಂಭವಾಗಲಿದ್ದು, ಅದರ ಹಿಂದಿನ ದಿನ ಈ ದುರ್ಘಟನೆ ಸಂಭವಿಸಿರುವುದು ಆಘಾತವುಂಟುಮಾಡಿದೆ. ಸಮ್ಮೇಳನದ ತಯಾರಿ ಭಾಗವಾಗಿ ಅವರು ಜಿಲ್ಲೆಯ ಮುಖಂಡರ ಜೊತೆಗೂಡಿ ತಿಂಗಳಿAದ ಸತತವಾಗಿ ಸಿದ್ಧತೆಯಲ್ಲಿ ತೊಡಗಿದ್ದರು.
ವೆಂಕಟೇಶ್ ಅವರ ನಿಧನದಿಂದ ಜಿಲ್ಲೆಯ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ, ರೈತರು, ಕೂಲಿಕಾರರು ಹಾಗೂ ಬಡವರ ಚಳವಳಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಸಿಪಿಎಂ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಪಿ.ಆರ್ ಸೂರ್ಯನಾರಾಯಣ ದುಃಖ ವ್ಯಕ್ತಪಡಿಸಿದ್ದಾರೆ.
ವೆಂಕಟೇಶ್ ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡುವ ಹಾಗೂ ಎಂತದ್ದೇ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಾಯಕರಾಗಿದ್ದವರು. ಎರಡು ಬಾರಿ ಎಸ್ಎಫ್ಐ ನೇತೃತ್ವದ ವಿದ್ಯಾರ್ಥಿ ಚಳವಳಿಯಲ್ಲಿ ಭಾಗವಹಿಸಿದ್ದರು. ೧೯೯೬ರಲ್ಲಿ ಪ್ರಾಂತ ರೈತ ಸಂಘದ ಕೋಲಾರ ತಾಲ್ಲೂಕು ಸಂಘಟನಾ ಸಮ್ಮೇಳನ ನಡೆದಾಗ ಆ ಸಮ್ಮೇಳನದಲ್ಲಿ ರೈತ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ತಾಲ್ಲೂಕಿನ ರೈತ ಸಂಘದ ಮುಖಂಡರಾಗಿ ಆಯ್ಕೆಯಾಗಿದ್ದರು. ೨೦೦೮ ರಿಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಎರಡು ಅವಧಿ ಪೂರೈಸಿದ್ದರು. ೨೦೨೩ರಲ್ಲಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ೨೦೨೬ರಲ್ಲಿ ಪುನರಾಯ್ಕೆಯಾಗಿದ್ದರು. ಜಿಲ್ಲೆಯ ರೈತ ಚಳವಳಿಯಲ್ಲಿ ೨೦ ವರ್ಷಗಳಿಂದ ನಿರಂತರವಾಗಿ ಅರ್ಪಿಸಿಕೊಂಡು ಹಗಲು ರಾತ್ರಿ ದುಡಿದಿದ್ದರು.
ಜಿಲ್ಲೆಯ ವಿದ್ಯುತ್ ಹೋರಾಟ, ತರಕಾರಿ, ಟೊಮೊಟೊ, ಮಾವು ಬೆಲೆ ಕುಸಿದಾಗ ಹೋರಾಟ, ಶಾಶ್ವತ ನೀರಾವರಿ ಹೋರಾಟ, ಮನರೇಗಾ ಕೂಲಿಕಾರರ ವೇತನ ಸಮಸ್ಯೆ ಹೋರಾಟ, ಬಡವರಿಗೆ ಬ್ಯಾಂಕ್ ಸಾಲ ನೀಡಬೇಕೆನ್ನುವ ಹೋರಾಟ, ಚೆನ್ನೈ ಬೆಂಗಳೂರು ಎಕ್ಸ್ಪ್ರೆಸ್ ವೇ ರೈತ ವಿರೋಧಿ ಭೂಸ್ವಾಧೀನದ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದರು. ರೇಷ್ಮೆ, ಕೋಳಿ ಸಾಕಣೆದಾರರನ್ನು ಸಂಘಟಿಸಿದ್ದರು. ಬಗುರ್ ಉಕುಂ ಸಾಗುವಳಿ ಸಕ್ರಮದ ಪ್ರಶ್ನೆ, ಪಿ.ನಂಬರ್ಗಳ ದುರಸ್ತಿ ಹಾಗೂ ಅರಣ್ಯ ಇಲಾಖೆಯವರ ರೈತರ ಮೇಲಿನ ಅಕ್ರಮಣಕಾರಿ ನೀತಿಗಳ ವಿರುದ್ಧ ಸಮರ ಶೀಲ ಹೋರಾಟ ನಡೆಸಿದ್ದರು.
ಕಳೆದ ೨೦೦೭ ರಿಂದ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಸಾಮಾನ್ಯ ಸದಸ್ಯನಾಗಿ ಪಕ್ಷದ ಸೈದ್ಧಾಂತಿಕ ವಿಚಾರಗಳಿಗೆ ಬದ್ಧರಾಗಿದ್ದರು. ಶಿಸ್ತು ಬದ್ಧವಾಗಿ ಕೆಲಸ ಮಾಡುತ್ತಾ ಕೋಲಾರ ತಾಲ್ಲೂಕಿನ ಪಕ್ಷದ ತಾಲ್ಲೂಕು ಸಮಿತಿ ಸದಸ್ಯರಾಗಿ, ತಾಲ್ಲೂಕು ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಬಹಳ ವೇಗವಾಗಿ ಜಿಲ್ಲಾ ಸಮಿತಿಯ ಸದಸ್ಯರಾಗಿ, ನಂತರ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿ ಹಲವಾರು ಸಾಮೂಹಿಕ ಚಳವಳಿಯ ಜವಾಬ್ದಾರಿಗಳನ್ನು ಹೊತ್ತು ಹಗಲಿರಳು ದುಡಿಯುತ್ತಿದ್ದರು ಎಂದು ಮುಖಂಡರು ಸ್ಮರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್