ಟೆಹ್ರಾನ್–ಬೈರುತ್ ಮೇಲೆ ಇಸ್ರೇಲ್ ದಾಳಿ; ಇರಾನ್ ಪ್ರತಿದಾಳಿ
ಟೆಲ್ ಅವಿವ್/ಟೆಹ್ರಾನ್, 06 ಮಾರ್ಚ್ (ಹಿ.ಸ.): ಆ್ಯಂಕರ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಶುಕ್ರವಾರ ಬೆಳಿಗ್ಗೆ ಟೆಹ್ರಾನ್ ನಗರದ ಹಲವು ಗುರಿಗಳ ಮೇಲೆ ಹೊಸ ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿದೆ. ಇದೇ ವೇಳೆ ಬೈರುತ್ ನಗರದ ದಹಿಯಾ
War


ಟೆಲ್ ಅವಿವ್/ಟೆಹ್ರಾನ್, 06 ಮಾರ್ಚ್ (ಹಿ.ಸ.):

ಆ್ಯಂಕರ್:

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದ್ದು, ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಶುಕ್ರವಾರ ಬೆಳಿಗ್ಗೆ ಟೆಹ್ರಾನ್ ನಗರದ ಹಲವು ಗುರಿಗಳ ಮೇಲೆ ಹೊಸ ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿದೆ. ಇದೇ ವೇಳೆ ಬೈರುತ್ ನಗರದ ದಹಿಯಾ ಪ್ರದೇಶದಲ್ಲಿರುವ ಹಿಜ್ಬುಲ್ಲಾ ಸಂಘಟನೆಯ ನೆಲೆಗಳ ಮೇಲೂ ಬಾಂಬ್ ದಾಳಿ ನಡೆದಿರುವುದಾಗಿ ವರದಿಯಾಗಿದೆ.

ಅಂತಾರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ಇಸ್ರೇಲ್ ಸೇನೆ ಟೆಹ್ರಾನ್‌ನಲ್ಲಿ “ಭಯೋತ್ಪಾದಕ ಮೂಲಸೌಕರ್ಯ” ಎಂದು ಹೇಳಲಾದ ಗುರಿಗಳನ್ನು ಹೊಡೆದುರುಳಿಸಿದೆ. ಲೆಬನಾನ್‌ನ ರಾಜಧಾನಿ ಬೈರುತ್‌ನ ದಕ್ಷಿಣ ಭಾಗದಲ್ಲಿರುವ ದಹಿಯಾ ಪ್ರದೇಶವನ್ನು ಹೆಜ್ಬೊಲ್ಲಾದ ಪ್ರಮುಖ ಕೋಟೆಯಾಗಿ ಪರಿಗಣಿಸಲಾಗುತ್ತದೆ.

ದಾಳಿಯ ನಂತರ ದಕ್ಷಿಣ ಲೆಬನಾನ್ ಗಡಿಭಾಗದಲ್ಲಿ ಎಚ್ಚರಿಕಾ ಸೈರನ್‌ಗಳು ಮೊಳಗಿದವು. ಪ್ರತಿಕ್ರಿಯೆಯಾಗಿ ಇರಾನ್ ಹಲವು ಕ್ಷಿಪಣಿಗಳನ್ನು ಉಡಾಯಿಸಿದ್ದು, ಇಸ್ರೇಲ್ ಪ್ರದೇಶಗಳಲ್ಲಿಯೂ ಸೈರನ್‌ಗಳು ಮೊಳಗಿದವು ಎಂದು ವರದಿಯಾಗಿದೆ.

ಇದರಿಂದಾಗಿ ಗಡಿ ಭಾಗಗಳಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಹೆಜ್ಬೊಲ್ಲಾ ತನ್ನ ಟೆಲಿಗ್ರಾಮ್ ಸಂದೇಶದ ಮೂಲಕ ಗಡಿಯ ಸಮೀಪದ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡಲು ನಾಗರಿಕರಿಗೆ ಮನವಿ ಮಾಡಿದೆ. “ಲೆಬನಾನ್‌ನ ಸ್ವಾತಂತ್ರ್ಯ ಮತ್ತು ನಾಗರಿಕರ ಸುರಕ್ಷತೆಯನ್ನು ಕಾಪಾಡಲು ಇಸ್ರೇಲಿ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಲಾಗುತ್ತದೆ” ಎಂದು ಸಂಘಟನೆ ಹೇಳಿದೆ.

ಇದರ ನಡುವೆ, ಇರಾನ್ ಬೆಂಬಲಿತ ಪಡೆಗಳು ಮನಮಾ (ಬಹ್ರೇನ್ ರಾಜಧಾನಿ) ನಗರದ ಒಂದು ಹೋಟೆಲ್ ಹಾಗೂ ಎರಡು ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಬಹ್ರೇನ್‌ನ ಆಂತರಿಕ ಸಚಿವಾಲಯ ತಿಳಿಸಿದೆ.

ಆಂತರಿಕ ಸಚಿವಾಲಯದ ಪ್ರಕಾರ, ದಾಳಿಯಿಂದ ಕಟ್ಟಡದ ಒಂದು ಫ್ಲಾಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೂ ನಾಗರಿಕ ರಕ್ಷಣಾ ಪಡೆಗಳು ಅದನ್ನು ನಂದಿಸಿವೆ. ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಉಗ್ರವಾಗಿರುವ ಇರಾನ್-ಇಸ್ರೇಲ್ ಸಂಘರ್ಷ ಹಿನ್ನೆಲೆ ಈ ಹೊಸ ದಾಳಿಗಳು ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿವೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande