
ಟೆಹ್ರಾನ್, 05 ಮಾರ್ಚ್ (ಹಿ.ಸ.):
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಭಾರೀ ಉದ್ವಿಗ್ನತೆ ಜಾಗತಿಕ ಆತಂಕಕ್ಕೆ ಕಾರಣವಾಗಿದೆ. ಅಲಿ ಖಮೆನಿ ಸಾವನ್ನಪ್ಪಿದ ನಂತರ ಇರಾನ್‌ನಲ್ಲಿ ಅಸ್ಥಿರತೆ ತೀವ್ರಗೊಂಡಿದ್ದು, ಅಂತ್ಯಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಸರ್ಕಾರ ಘೋಷಿಸಿದೆ.
ಶ್ರೀಲಂಕಾ ಸಮೀಪ ಯುದ್ಧನೌಕೆ ಮೇಲೆ ದಾಳಿ
ಅಮೆರಿಕ ರಕ್ಷಣಾ ಇಲಾಖೆ ಮಾಹಿತಿ ಪ್ರಕಾರ, ಹಿಂದೂ ಮಹಾಸಾಗರದಲ್ಲಿ ಗಾಲೆ ನಗರದಿಂದ ಸುಮಾರು 40 ಸಮುದ್ರ ಮೈಲು ದೂರದಲ್ಲಿ ಇರಾನ್ ಯುದ್ಧನೌಕೆ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ 87 ಇರಾನ್ ನೌಸೈನಿಕರು ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶ್ರೀಲಂಕಾ ನೌಕಾಪಡೆ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದೆ.
ಈ ಯುದ್ಧನೌಕೆ ಕಳೆದ ತಿಂಗಳು ವಿಶಾಖಪಟ್ಟಣಂನಲ್ಲಿ ನಡೆದ 2026ರ ಅಂತಾರಾಷ್ಟ್ರೀಯ ಫ್ಲೀಟ್ ರಿವ್ಯೂನಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದಾಗ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಮಧ್ಯ ಇಸ್ರೇಲ್‌ನಲ್ಲಿ ಎಚ್ಚರಿಕಾ ಘಂಟೆ
ಇರಾನ್ ಕ್ಷಿಪಣಿ ದಾಳಿಯ ಭೀತಿಯಿಂದ ಮಧ್ಯ ಇಸ್ರೇಲ್‌ನಲ್ಲಿ ರಾತ್ರಿಯಿಡೀ ಎಚ್ಚರಿಕಾ ಸೈರನ್ ಮೊಳಗಿದವು. ಐಡಿಎಫ್ ನಾಗರಿಕರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿತು. ಬಳಿಕ ಲೆಬನಾನ್‌ನ ಬೈರುತ್ ನಗರದಲ್ಲಿ ಹಿಜ್ಬುಲ್ಲಾ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಮೆರಿಕಾ ನಾಗರಿಕರ ಸ್ಥಳಾಂತರ
ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಮಾಹಿತಿ ಪ್ರಕಾರ, ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಯುಎಸ್ ಚಾರ್ಟರ್ಡ್ ವಿಮಾನ ಮಧ್ಯಪ್ರಾಚ್ಯದಿಂದ ಹೊರಟಿದೆ. ಫೆಬ್ರವರಿ 28ರಿಂದ ಇಂದಿನವರೆಗೆ 17,500ಕ್ಕೂ ಅಧಿಕ ಅಮೆರಿಕನ್ನರು ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. ನಾಗರಿಕರಿಗೆ ಕ್ರೈಸಿಸ್ ಇಂಟೇಕ್ ಫಾರ್ಮ್ ಭರ್ತಿ ಮಾಡಲು ಅಥವಾ 24/7 ಟಾಸ್ಕ್ ಫೋರ್ಸ್ ಸಂಪರ್ಕಿಸಲು ಸೂಚಿಸಲಾಗಿದೆ.
ಡ್ರೋನ್ ದಾಳಿ, ತೀವ್ರ ಎಚ್ಚರಿಕೆ
ಬಹರೈನ್‌ನ ಅಮೆಜಾನ್ ಡೇಟಾ ಸೆಂಟರ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆಯೆಂದು ಹೇಳಿಕೊಂಡಿದೆ. ಇತ್ತ ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಇರಾನ್ ವಿರುದ್ಧದ ಕಾರ್ಯಾಚರಣೆ ಆರಂಭಿಕ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
1,000ಕ್ಕೂ ಅಧಿಕ ಸಾವು
ಮಾನವ ಹಕ್ಕು ಸಂಘಟನೆಗಳ ಪ್ರಕಾರ, ಇರಾನ್ ಒಳಗೇ ನಡೆದ ಅಮೆರಿಕಾ–ಇಸ್ರೇಲ್ ದಾಳಿಗಳಿಂದ 1,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಂಟರ್ನೆಟ್ ಮಾನಿಟರಿಂಗ್ ಸಂಸ್ಥೆ ನೆಟ್ ಬ್ಲಾಕ್ ವರದಿ ಪ್ರಕಾರ, ಇರಾನ್‌ನಲ್ಲಿ ಸುಮಾರು 100 ಗಂಟೆಗಳ ಕಾಲ ಇಂಟರ್ನೆಟ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.
ಡಿಮೋನಾ ಅಣು ಕೇಂದ್ರಕ್ಕೆ ಬೆದರಿಕೆ
ಅಮೆರಿಕಾ ಮತ್ತು ಇಸ್ರೇಲ್ ಆಡಳಿತ ಬದಲಾವಣೆ ಯತ್ನಿಸಿದರೆ ದಕ್ಷಿಣ ಇಸ್ರೇಲ್‌ನ ಡಿಮೋನಾ ಅಣು ಕೇಂದ್ರವನ್ನು ಗುರಿಯಾಗಿಸಬಹುದು ಎಂದು ಇರಾನ್ ಸೈನಿಕ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ಪ್ರತಿಕ್ರಿಯೆ
ಇರಾಕ್‌ನ ಪ್ರಮುಖ ಶಿಯಾ ಧರ್ಮಗುರು ಅಲಿ ಅಲ್-ಸಿಸ್ತಾನಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಉದ್ವಿಗ್ನತೆ ತಗ್ಗಿಸಲು ಮನವಿ ಮಾಡಿದ್ದಾರೆ. ಬ್ರಿಟನ್ ಸರ್ಕಾರ ಲಂಡನ್‌ನಲ್ಲಿ ಇರಾನ್ ರಾಯಭಾರಿಯನ್ನು ಕರೆಯಿಸಿಕೊಂಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa