
ನವದೆಹಲಿ, 05 ಮಾರ್ಚ್ (ಹಿ.ಸ.):
ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಮತ್ತು ಫಿನ್ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ನಡುವಿನ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಗಳ ಬಳಿಕ ಭಾರತ–ಫಿನ್ಲ್ಯಾಂಡ್ ಸಂಬಂಧಗಳು ಹೊಸ ದಿಕ್ಕು ಪಡೆದಿವೆ. ನವದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ನಡೆದ ಸಭೆಯಲ್ಲಿ ಉಭಯ ರಾಷ್ಟ್ರಗಳು ತಮ್ಮ ಸಂಬಂಧವನ್ನು “ಡಿಜಿಟಲೀಕರಣ ಮತ್ತು ಸುಸ್ಥಿರತೆಯಲ್ಲಿ ಕಾರ್ಯತಂತ್ರದ ಪಾಲುದಾರಿಕೆ ಏರಿಸಲು ಐತಿಹಾಸಿಕ ನಿರ್ಧಾರ ಕೈಗೊಂಡವು.
ಮಾತುಕತೆಯ ಬಳಿಕ ವಿದೇಶಾಂಗ ಸಚಿವಾಲಯದ ವಕ್ತಾರರು, “ಹಂಚಿಕೆಯ ಪ್ರಗತಿ ಮತ್ತು ಸಮೃದ್ಧಿಗಾಗಿ ಪಾಲುದಾರಿಕೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆ” ಎಂದು ಈ ಬೆಳವಣಿಗೆಯನ್ನು ವರ್ಣಿಸಿದರು.
ಉಭಯ ದೇಶಗಳು 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿ ನಿಗದಿಪಡಿಸಿವೆ. ವ್ಯಾಪಾರ ಮತ್ತು ಹೂಡಿಕೆ, ಡಿಜಿಟಲೀಕರಣ, ಸುಸ್ಥಿರತೆ, ಶುದ್ಧ ಇಂಧನ ಹಾಗೂ ವೃತ್ತಾಕಾರದ ಆರ್ಥಿಕತೆ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸಲು ಒಪ್ಪಂದವಾಗಿದೆ.
6G, ಕೃತಕ ಬುದ್ಧಿಮತ್ತೆ , ಕ್ವಾಂಟಮ್ ಕಂಪ್ಯೂಟಿಂಗ್, ಅರೆವಾಹಕಗಳು ಮತ್ತು ನಿರ್ಣಾಯಕ ಖನಿಜಗಳ ಕ್ಷೇತ್ರಗಳಲ್ಲಿ ಜಂಟಿ ಕಾರ್ಯಪಡೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಡಿಜಿಟಲ್ ಮತ್ತು ಪರಿಸರ ಸಮಸ್ಯೆಗಳ ಕುರಿತ ಜಂಟಿ ಸಂಶೋಧನೆ, ಅಂಕಿಅಂಶಗಳ ವಿನಿಮಯ ಹಾಗೂ ಚಲನಶೀಲತೆ ವಿಷಯಗಳ ಕುರಿತು ಕಾನ್ಸುಲರ್ ಸಂವಾದ ವ್ಯವಸ್ಥೆ ರೂಪಿಸುವುದಕ್ಕೂ ಒಪ್ಪಿಗೆ ದೊರೆತಿದೆ.
ಈ ವರ್ಷ ಭಾರತದಲ್ಲಿ ವಿಶ್ವ ವೃತ್ತಾಕಾರದ ಆರ್ಥಿಕ ವೇದಿಕೆಯನ್ನು ಜಂಟಿಯಾಗಿ ಆಯೋಜಿಸಲು ಉಭಯ ರಾಷ್ಟ್ರಗಳು ನಿರ್ಧರಿಸಿವೆ. ಸುಸ್ಥಿರ ನಗರ ಪರಿಹಾರಗಳು ಮತ್ತು ಪರಿಸರ ಸಂರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ.
ಫಿನ್ಲ್ಯಾಂಡ್ ಭಾರತೀಯ ಪ್ರತಿಭೆ ಮತ್ತು ನವೋದ್ಯಮಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಲು ಸಮ್ಮತಿಸಿದೆ. ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ಆಳಗೊಳಿಸಲು ಉಭಯ ನಾಯಕರು ಬದ್ಧತೆ ವ್ಯಕ್ತಪಡಿಸಿದರು.
ಎಲ್ಲಾ ರೀತಿಯ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ಬಗ್ಗೆ ಉಭಯ ನಾಯಕರು ತಮ್ಮ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸಿದರು. ಪ್ರಾದೇಶಿಕ ಮತ್ತು ಜಾಗತಿಕ ವಿಚಾರಗಳ ಕುರಿತು ಅಭಿಪ್ರಾಯ ವಿನಿಮಯ ನಡೆಸಿ, ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ ಮುಂದುವರಿಸಲು ಒಪ್ಪಿಕೊಂಡರು.
ಇತ್ತೀಚೆಗೆ ಮುಕ್ತಾಯಗೊಂಡ ಯುರೋಪಿಯನ್ ಒಕ್ಕೂಟ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದದಿಂದ ಉಂಟಾಗುವ ವ್ಯಾಪಾರ, ಹೂಡಿಕೆ ಮತ್ತು ಉದ್ಯೋಗಾವಕಾಶಗಳ ಲಾಭವನ್ನು ಪಡೆದುಕೊಳ್ಳಲು ನಾಯಕರು ಒಮ್ಮತ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಡಿಜಿಟಲ್ ರೂಪಾಂತರ, ಕೌಶಲ್ಯಾಭಿವೃದ್ಧಿ ಹಾಗೂ ವ್ಯವಹಾರ ಸುಲಭತೆ ಕ್ಷೇತ್ರಗಳಲ್ಲಿ ಭಾರತದ ಉಪಕ್ರಮಗಳನ್ನು ಎತ್ತಿ ತೋರಿಸಿ, ಭಾರತದ ಪ್ರಮುಖ ಕಾರ್ಯಕ್ರಮಗಳಲ್ಲಿ ಫಿನ್ಲ್ಯಾಂಡ್ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಆಹ್ವಾನ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa