
ನವದೆಹಲಿ, 31 ಮಾರ್ಚ್ (ಹಿ.ಸ.):
ಆ್ಯಂಕರ್:
ಫೀಡೆ ಅಭ್ಯರ್ಥಿಗಳ ಪಂದ್ಯಾವಳಿ 2026ನಲ್ಲಿ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ತಮ್ಮ ಉತ್ತಮ ಲಯವನ್ನು ಮುಂದುವರಿಸಿಕೊಂಡು, 2ನೇ ಸುತ್ತಿನಲ್ಲಿ ಚೀನಾದ ವೀ ಯಿ ವಿರುದ್ಧ ಡ್ರಾ ಸಾಧಿಸಿ ಜಂಟಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.
ಮೊದಲ ಸುತ್ತಿನಲ್ಲಿ ಅನಿಶ ಗಿರಿ ವಿರುದ್ಧ ಗೆಲುವು ಸಾಧಿಸಿದ್ದ ಪ್ರಜ್ಞಾನಂದ, ಈ ಬಾರಿ ಪೆಟ್ರೋಫ್ ಡಿಫೆನ್ಸ್ ಎದುರಿಸಿ ಸಮತೋಲನದ ಆಟ ಪ್ರದರ್ಶಿಸಿದರು. ಇಬ್ಬರೂ ಆಟಗಾರರು ನಿಖರ ಹಾಗೂ ಎಚ್ಚರಿಕೆಯಿಂದ ಆಡಿದ ಹಿನ್ನೆಲೆಯಲ್ಲಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.
ಮಹಿಳಾ ವಿಭಾಗ:
ಮಹಿಳಾ ವಿಭಾಗದಲ್ಲಿ ದಿವ್ಯಾ ದೇಶಮುಖ ಮತ್ತು ಆರ್.ವೈಶಾಲಿ ನಡುವಿನ ಕಠಿಣ ಪೈಪೋಟಿಯೂ ಡ್ರಾದಲ್ಲಿ ಕೊನೆಗೊಂಡಿತು. ದಿವ್ಯಾ ಉತ್ತಮ ಸ್ಥಿತಿ ನಿರ್ಮಿಸಿಕೊಂಡರೂ, ಸಮಯದ ಒತ್ತಡದಲ್ಲಿದ್ದ ವೈಶಾಲಿ ಸಮತೋಲನ ಕಾಪಾಡಿಕೊಂಡು ಡ್ರಾ ಸಾಧಿಸಿದರು.
ಇತರೆ ಫಲಿತಾಂಶಗಳು:
ಮುಕ್ತ ವಿಭಾಗದಲ್ಲಿ ಫ್ಯಾಬಿಯಾನೊ ಕರುವಾನಾ–ಅನಿಶ್ ಗಿರಿ, ಹಿಕರು ನಕಮುರಾ–ಆಂಡ್ರೆ ಎಸಿಪೆಂಕೊ ಹಾಗೂ ಮಥಿಯಾಸ್ ಬ್ಲೂಬಾಮ್–ಜಾವೊಖಿರ್ ಸಿಂದರೋವ್ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡವು.
ಮಹಿಳಾ ವಿಭಾಗದ ಮತ್ತೊಂದು ಪಂದ್ಯದಲ್ಲಿ ಝು ಜಿನರ್ ಮುನ್ನಡೆ ಸಾಧಿಸಿದ್ದರೂ, ಬಿಬಿಸಾರ ಅಸ್ಸೌಬಯೇವ ವಿರುದ್ಧ ಕೊನೆಯಲ್ಲಿ ಡ್ರಾದಲ್ಲಿ ಸಮಾಧಾನಪಟ್ಟರು.
ಒಟ್ಟಾರೆ, ಎರಡನೇ ಸುತ್ತಿನಲ್ಲಿ ಬಹುತೇಕ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದು, ಅಂಕಗಳ ಪಟ್ಟಿಯಲ್ಲಿ ಕಠಿಣ ಪೈಪೋಟಿ ಮುಂದುವರಿದಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa