
ಢಾಕಾ, 31 ಮಾರ್ಚ್ (ಹಿ.ಸ.):
ಆ್ಯಂಕರ್:
ಉತ್ತರ ಆಫ್ರಿಕಾದ ಲಿಬಿಯಾ ದಿಂದ ಯುರೋಪಿನ ಗ್ರೀಸ್ ಕಡೆಗೆ ಸಾಗುತ್ತಿದ್ದ ವಲಸಿಗರ ದೋಣಿ ಸಮುದ್ರದಲ್ಲಿ ದಾರಿ ತಪ್ಪಿದ ಪರಿಣಾಮ ಭೀಕರ ದುರಂತ ಸಂಭವಿಸಿ, ಒಟ್ಟು 22 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ 12 ಮಂದಿ ಬಾಂಗ್ಲಾದೇಶ ಮೂಲದ ಯುವಕರು ಸೇರಿದ್ದಾರೆ.
ಸುನಮ್‌ಗಂಜ್ ಜಿಲ್ಲೆಯ ಉಪ ಆಯುಕ್ತ ಮೊಹಮ್ಮದ್ ಇಲ್ಯಾಸ್ ಮಿಯಾ ಈ ಘಟನೆ ದೃಢಪಡಿಸಿದ್ದು, ಮಾನವ ಕಳ್ಳಸಾಗಣೆ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಮೃತರಲ್ಲಿ ಆರು ಮಂದಿ ಡೆರೈ, ಐದು ಮಂದಿ ಜಗನ್ನಾಥಪುರ ಮತ್ತು ಒಬ್ಬರು ದೋರಾಬಜಾರ್ ಉಪಜಿಲ್ಲೆಗೆ ಸೇರಿದವರಾಗಿದ್ದಾರೆ.
ಮಾರ್ಚ್ 28 ರಂದು ಗ್ರೀಕ್ ಕೋಸ್ಟ್ ಗಾರ್ಡ್ 26 ಮಂದಿಯನ್ನು ರಕ್ಷಿಸಿದ್ದು, ಅವರನ್ನು ಗ್ರೀಸ್‌ನ ಶಿಬಿರಗಳಲ್ಲಿ ಇರಿಸಲಾಗಿದೆ. ಸಮುದ್ರದಿಂದ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಟುಂಬ ಸದಸ್ಯರ ಆರೋಪದ ಪ್ರಕಾರ, ಮಾನವ ಕಳ್ಳಸಾಗಣೆದಾರರು ಯುವಕರನ್ನು ಇಟಲಿಗೆ ಕರೆದೊಯ್ಯುವುದಾಗಿ ಭರವಸೆ ನೀಡಿ 12 ರಿಂದ 15 ಲಕ್ಷ ಟಾಕಾ ವರೆಗೆ ಹಣ ಪಡೆದು ಮೋಸ ಮಾಡಿದ್ದಾರೆ. ಮೊದಲಿಗೆ ಅವರನ್ನು ಲಿಬಿಯಾಗೆ ಕರೆದೊಯ್ಯಲಾಗಿದ್ದು, ಬಳಿಕ ಕಿಕ್ಕಿರಿದ ದೋಣಿಗಳಲ್ಲಿ ಅಪಾಯಕರ ಸಮುದ್ರಯಾನಕ್ಕೆ ಬಲವಂತ ಮಾಡಲಾಗಿದೆ.
ಈ ಘಟನೆ ಮತ್ತೆ ಯುರೋಪ್‌ಗೆ ಅಕ್ರಮ ವಲಸೆ ಪ್ರಯತ್ನಗಳ ಅಪಾಯಗಳನ್ನು ಹೊರಹಾಕಿದ್ದು, ಮಾನವ ಕಳ್ಳಸಾಗಣೆ ಜಾಲಗಳ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa