
ಬೆಂಗಳೂರು, 31 ಮಾರ್ಚ್ (ಹಿ.ಸ.):
ಆ್ಯಂಕರ್:
ಅಡುಗೆ ಅನಿಲದ ಕೊರತೆ ಮತ್ತು ನಿರಂತರ ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಬಿಜೆಪಿಯ ‘ಉಜ್ವಲ’ ಯೋಜನೆ ಈಗ ‘ಸೌದೆ ಭಾಗ್ಯ’ವಾಗಿ ಬದಲಾಗಿದೆ” ಎಂದು ಕಿಡಿಕಾರಿದರು.
ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುದ್ಧಗಳ ನೆಪವೊಡ್ಡಿ ಕೇಂದ್ರ ಸರ್ಕಾರ ದೇಶದೊಳಗಿನ ಬೆಲೆ ಏರಿಕೆ ಸಮಸ್ಯೆಯನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.
ಅಡುಗೆ ಅನಿಲದ ಸಮರ್ಪಕ ಪೂರೈಕೆ ಇಲ್ಲದ ಕಾರಣ ಸಾಮಾನ್ಯ ಜನತೆ ಮಾತ್ರವಲ್ಲದೆ ಹೋಟೆಲ್ ಉದ್ಯಮಕ್ಕೂ ತೀವ್ರ ತೊಂದರೆಯಾಗುತ್ತಿದೆ. “ಇದು ‘ಉಜ್ವಲ’ ಯೋಜನೆಯಲ್ಲ, ಜನರಿಗೆ ‘ಸೌದೆ ಭಾಗ್ಯ’ ನೀಡಿದಂತಾಗಿದೆ” ಎಂದು ವ್ಯಂಗ್ಯವಾಡಿದರು.
ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಜನರ ಬದುಕು ದುಸ್ತರವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ‘ಗ್ಯಾರೆಂಟಿ’ ಯೋಜನೆಗಳು ಜನರಿಗೆ ನೆರವಾಗಿವೆ ಎಂದು ಅವರು ಹೇಳಿದರು.
ಇದೀಗ ಟೋಲ್ ದರ ಏರಿಕೆ ಮತ್ತು ಸುಮಾರು 900ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆ ಹೆಚ್ಚಳದ ಮೂಲಕ ಕೇಂದ್ರ ಸರ್ಕಾರ ಜನರ ಮೇಲೆ ಮತ್ತಷ್ಟು ಆರ್ಥಿಕ ಭಾರ ಹಾಕಿದೆ ಎಂದು ಆರೋಪಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿದ್ದ ‘ಅಚ್ಛೇ ದಿನಗಳು’ ಭರವಸೆ ಕುರಿತು ಪ್ರಶ್ನಿಸಿದ ಅವರು, “ಅಚ್ಛೇ ದಿನಗಳು ಎಲ್ಲಿವೆ? ಈಗ ‘ಕಚ್ಚಾ ದಿನ’ಗಳೇ ಬಂದಂತಾಗಿದೆ” ಎಂದು ಟೀಕಿಸಿದರು.
ಏಪ್ರಿಲ್ 1ರಿಂದ ವಿವಿಧ ವಸ್ತುಗಳ ಬೆಲೆ ಏರಿಕೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರ ಜನರನ್ನು ‘ಏಪ್ರಿಲ್ ಫೂಲ್’ ಮಾಡಿದೆ ಎಂದು ಅವರು ಕಟುವಾಗಿ ಪ್ರತಿಕ್ರಿಯಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa