
ಪಾಟ್ನಾ, 31 ಮಾರ್ಚ್ (ಹಿ.ಸ.):
ಆ್ಯಂಕರ್:
ಬಿಹಾರದ ನಳಂದ ಜಿಲ್ಲೆಯ ಮಘ್ರಾ ಗ್ರಾಮದಲ್ಲಿರುವ ಮಾತಾ ಶೀತ್ಲಾ ದೇವಿ ದೇವಸ್ಥಾನದಲ್ಲಿ ಮಂಗಳವಾರ ನಡೆದ ಶೀತ್ಲಾ ಅಷ್ಟಮಿ ಜಾತ್ರೆ ಭೀಕರ ದುರಂತಕ್ಕೆ ಸಾಕ್ಷಿಯಾಯಿತು. ಭಾರಿ ಜನಸಂದಣಿಯಿಂದ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ 8 ಭಕ್ತರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ದೇವಸ್ಥಾನ ಆವರಣ ಹಾಗೂ ಆಸ್ಪತ್ರೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರಲ್ಲಿ ಇಬ್ಬರನ್ನು ರೀತಾ ದೇವಿ (50) ಮತ್ತು ರೇಖಾ ದೇವಿ (45) ಎಂದು ಗುರುತಿಸಲಾಗಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ ₹6 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಅವರು ಆಶಿಸಿದ್ದಾರೆ. ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸಹ ದುಃಖ ವ್ಯಕ್ತಪಡಿಸಿ, ಸರ್ಕಾರದಿಂದ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಜಾತ್ರೆಯ ಕೊನೆಯ ದಿನವಾದುದರಿಂದ ಭಕ್ತರ ಸಂಖ್ಯೆ ಏಕಾಏಕಿ ಹೆಚ್ಚಳವಾಗಿದ್ದು, ಗರ್ಭಗುಡಿಯ ಸಣ್ಣ ಪ್ರವೇಶದ್ವಾರ ಹಾಗೂ ಸಮರ್ಪಕ ವ್ಯವಸ್ಥೆಯ ಕೊರತೆಯಿಂದ ಗೊಂದಲ ಉಂಟಾಯಿತು. ದರ್ಶನಕ್ಕಾಗಿ ಭಕ್ತರು ಒಬ್ಬರನ್ನೊಬ್ಬರು ತಳ್ಳಿಕೊಂಡ ಪರಿಣಾಮ ಕಾಲ್ತುಳಿತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ತಕ್ಷಣ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಆದರೆ, ಸಮರ್ಪಕ ಪೊಲೀಸ್ ಬಂದೋಬಸ್ತ್, ಬ್ಯಾರಿಕೇಡಿಂಗ್ ಮತ್ತು ಜನಸಂದಣಿ ನಿಯಂತ್ರಣದ ಕೊರತೆ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರತಿ ವರ್ಷ ಚೈತ್ರ ಮಾಸದ ಶೀತ್ಲಾ ಅಷ್ಟಮಿಯಂದು ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ವಿಶೇಷವಾಗಿ ಈ ದಿನ ಮನೆಗಳಲ್ಲಿ ಅಡುಗೆ ಮಾಡದೇ, ಹಿಂದಿನ ದಿನ ತಯಾರಿಸಿದ ತಣ್ಣನೆಯ ಆಹಾರವನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa