
ಕೋಲಾರ ೦೩, ಮಾರ್ಚ್ (ಹಿ.ಸ) :
ಆಂಕರ್ : ಕರ್ನಾಟಕದ ಶ್ರೇಷ್ಠ ಸಂತರು ದಾರ್ಶನಿಕರು ಮತ್ತು ಸಮಾಜ ಸುಧಾರಕರಲ್ಲಿ ಒಬ್ಬರಾದ ತಾತಯ್ಯ ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ತಮ್ಮ ಅನುಭಾವವನ್ನೇ ತತ್ವಪದಗಳನ್ನಾಗಿ ರಚಿಸಿ ಹಾಡಿದರು. ಜನಸಾಮಾನ್ಯರಿಗೆ ಆಧ್ಯಾತ್ಮದ ದಾರಿಯನ್ನು ತೋರಿಸಿದ ಸೂಫಿಗಳು, ಸಂತರ ಪರಂಪರೆಯನ್ನು ಮುಂದುವರೆಸಿದರು. ಆಧ್ಯಾತ್ಮ ಅಂದರೆ ಚರ್ಮ ಶುದ್ಧಿಯ ಸಂಪ್ರದಾಯವಲ್ಲ, ಅಂತರಂಗ ಶುದ್ಧಿಯ ಹಾದಿ ಎನ್ನುವುದನ್ನು ಬದುಕಿ ತೋರಿಸಿದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.
ಕೋಲಾರದಲ್ಲಿ ನಡೆದ ಕೈವಾರ ತಾತಯ್ಯ ಅವರ ೩೦೦ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಜಾತಿ, ಧರ್ಮ, ಲಿಂಗ ಹಣ, ಅಂತಸ್ತು ಎಲ್ಲದರ ಶ್ರೇಷ್ಠತೆಯ ವ್ಯಸನವನ್ನು ನಿವಾಳಿಸಿದ ಕೈವಾರದ ಶ್ರೀ ಯೋಗಿ ನಾರೇಯಣ ಯತೀಂದ್ರರು ತಾತಯ್ಯ ಅಂತಲೇ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ಅಧ್ಯಾತ್ಮ ಎಂದರೆ ಬಹಳ ಕಠಿಣ, ಎಲ್ಲರ ಪಾಲಿನ ಪ್ರಸಾದ ಅಲ್ಲ ಎನ್ನುವ ಶ್ರೇಷ್ಠತೆಯನ್ನು ಅಳಿಸಿ, ಕಠಿಣವಾದ ಅಧ್ಯಾತ್ಮದ ಸಾರವನ್ನು ಸರಳ ಭಾಷೆಯಲ್ಲಿ ಸಮಾಜದ ಕಟ್ಟ ಕಡೆಯವರಿಗೂ ತಲುಪಿಸಿದ ಸಂತ ಶ್ರೇಷ್ಠರು ತಾತಯ್ಯ ಎಂದರು.
ಮನುಷ್ಯ ನಿರ್ಮಿಸಿದ ಎಲ್ಲವೂ ಕಡೆ ಗಾಲಕ್ಕೆ, ಕೇಡುಗಾಲಕ್ಕೆ ಜಾರುವ ನೈತಿಕ ಅವನತಿಯನ್ನು ತಾತಯ್ಯ ೩೦೦ ವರ್ಷಗಳ ಹಿಂದೆಯೇ ಹಾಡಿ ಮನುಕುಲವನ್ನು ಎಚ್ಚರಿಸಿದರು. ಈ ಕಾರಣಕ್ಕೇ ತಾತಯ್ಯ ಬರೆದಿರುವ 'ಕಾಲಜ್ಞಾನ' ಇಂದಿಗೂ ಪ್ರಸ್ತುತವಾಗಿದೆ ಮನುಷ್ಯನ ಶ್ರೇಷ್ಠತೆಯ ವ್ಯಸನಕ್ಕೆ ತಮ್ಮ ಅನುಭಾವದ ಮೂಲಕ ಮದ್ದು ಅರೆದವರು ಕೈವಾರ ತಾತಯ್ಯ ಅವರು, ಅದ್ಯಾತ್ಮ ಅಂದರೆ ಚರ್ಮಶುದ್ಧಿ ಅಲ್ಲ: ಅಂತರಂಗದ ಶುದ್ದಿ ಎಂದು ಬದುಕಿ ತೋರಿಸಿದವರು ಎಂದರು.
ಮಾನವೀಯತೆ ಮತ್ತು ಭಕ್ತಿಯೇ ಮುಕ್ತಿಗೆ ದಾರಿ ಎಂದು ಬೋಧಿಸಿ, ತಾತಯ್ಯ ಬರೆದ 'ಕಾಲಜ್ಞಾನ' ಕೇವಲ ಭವಿಷ್ಯವಾಣಿಯಲ್ಲ, ಅದು ಅಧ್ಯಾತ್ಮ ಮತ್ತು ಸಮಾಜದ ಅಂಕುಡೊAಕುಗಳನ್ನು ತಿದ್ದುವ ಒಂದು ದರ್ಶನ ಎಂದರು. ಇವತ್ತಿನ ಮನುಷ್ಯನ ನೈತಿಕ ಅವನತಿಯನ್ನು, ನಡವಳಿಕೆ ಹೇಗೆ ಬದಲಾಗುತ್ತದೆ ಎಂಬುದನ್ನು ೨೫೦ ವರ್ಷಗಳ ಹಿಂದೆಯೇ ವಿವರಿಸಿದ್ದಾರೆ.
ಶ್ರೇಷ್ಠತೆಯ ವ್ಯಸನ ಮತ್ತು ದ್ವೇಷ, ಸಣ್ಣತನಗಳಿಂದ ಮನುಷ್ಯ ಧರ್ಮವನ್ನು ಬಿಟ್ಟು ಅಧರ್ಮದ ಹಾದಿ ಹಿಡಿಯುತ್ತಾನೆ. ಸತ್ಯಕ್ಕೆ ಬೆಲೆ ಇಲ್ಲದಂತಾಗುತ್ತದೆ. ತಂದೆ-ತಾಯಿ ಮತ್ತು ಮಕ್ಕಳ ನಡುವಿನ ಗೌರವ ಕಡಿಮೆಯಾಗುತ್ತದೆ. ಗುರು-ಶಿಷ್ಯರ ಸಂಬಂಧ ಕೇವಲ ವ್ಯವಹಾರವಾಗುತ್ತದೆ. ಮನುಷ್ಯ ಹಣಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಾಗುತ್ತಾನೆ, ಹಸಿವು ಮತ್ತು ಬಡತನ ಹೆಚ್ಚಾದರೂ ಶ್ರೀಮಂತರು ಉದಾರಿಗಳಾಗುವುದಿಲ್ಲ ಎನ್ನುವ ಇವತ್ತಿನ ಸತ್ಯವನ್ನು ಅವತ್ತೇ ದಾಖಲಿಸಿದ್ದಾರೆ ಎಂದರು.
ಪ್ರಕೃತಿಯ ಮೇಲೆ ಮನುಷ್ಯನ ದಬ್ಬಾಳಿಕೆಯಿಂದ ಆಗುವ ಅನಾಹುತಗಳಿಗೆ ೨೫೦ ವರ್ಷಗಳ ಹಿಂದೆಯೇ ಕನ್ನಡಿ ಹಿಡಿದಿದ್ದಾರೆ. ಅಕಾಲಿಕ ಮಳೆ ಮತ್ತು ಭೀಕರ ಬರಗಾಲ, ಭೂಕಂಪಗಳು ಮತ್ತು ಜಲಪ್ರಳಯದಂತಹ ನೈಸರ್ಗಿಕ ವಿಕೋಪಗಳು ಸಂಭವಿಸುತ್ತವೆ.ಗಾಳಿ ಮತ್ತು ನೀರು ವಿಷಪೂರಿತವಾಗಿ ಹರಡುವ ರೋಗಗಳ ಬಗ್ಗೆಯೂ ಅವತ್ತೇ ಎಚ್ಚರಿಸಿದ್ದಾರೆ. ತಮ್ಮ ಅಧ್ಯಾತ್ಮ ಮತ್ತು ತತ್ವ ಪದಗಳ ಮೂಲಕ ಬ್ರಿಟೀಷರ ವಿರುದ್ಧದ ಹೋರಾಟಕ್ಕೂ ಸ್ಫೂರ್ತಿಯಾಗಿದ್ದ ತಾತಯ್ಯ, ರಾಜಕೀಯ ಮತ್ತು ಆಡಳಿತಗಾರರು ಪ್ರಜೆಗಳ ಹಿತ ಮರೆತು ಸ್ವಾರ್ಥಿಗಳಾಗುತ್ತಾರೆ. ನ್ಯಾಯಾಲಯಗಳಲ್ಲಿ ನ್ಯಾಯ ಸಿಗುವುದು ಕಷ್ಟವಾಗುತ್ತದೆ. ಗಡಿಗಳಲ್ಲಿ ಯುದ್ಧದ ಭೀತಿ ಮತ್ತು ಅಶಾಂತಿ ನೆಲೆಸುತ್ತದೆ ಎನ್ನುವ ಭವಿಷ್ಯವಾಣಿಯನ್ನೂ ದಾಖಲಿಸಿದ್ದಾರೆ.
*ತಾತಯ್ಯನವರು ವಿಜ್ಞಾನದ ಬೆಳವಣಿಗೆಯನ್ನು ಕಬ್ಬಿಣದ ಕುದುರೆಗಳು ಓಡುತ್ತವೆ, ಆಕಾಶದಲ್ಲಿ ಪಕ್ಷಿಗಳಂತೆ ಮನುಷ್ಯ ಹಾರುತ್ತಾನೆ ಎಂಬ ರೂಪಕಗಳ ಮೂಲಕ ವರ್ಣಿಸಿದ್ದರು. ಇಂದು ನಾವು ಬಳಸುವ ರೈಲು ಮತ್ತು ವಿಮಾನಗಳನ್ನು ಅವರು ಅಂದೇ ಊಹಿಸಿದ್ದರು.
ತಾತಯ್ಯನವರು ಕೇವಲ ಭಯ ಹುಟ್ಟಿಸಲು ಕಾಲಜ್ಞಾನ ಬರೆಯಲಿಲ್ಲ. ಕಾಲ ಬದಲಾದರೂ ಮನುಷ್ಯ ತನ್ನ ಅಂತರಾತ್ಮವನ್ನು ಶುದ್ಧವಾಗಿಟ್ಟುಕೊಂಡು, ಭಕ್ತಿಯ ಹಾದಿಯಲ್ಲಿ ನಡೆದರೆ ಎಂತಹ ಕಠಿಣ ಕಾಲವನ್ನೂ ಸುಲಭವಾಗಿ ದಾಟಬಹುದು ಎನ್ನುವ ಸಂದೇಶ ನೀಡಿದ್ದಾರೆ ಎಂದು ವಿವರಿಸಿದರು.
ಮನವ ನಿಲಿಸುವುದು ಬಲು ಕಷ್ಟವೋ ಎಂಬ ಮಾತಿನಂತೆ, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ಕಾಲಜ್ಞಾನದ ಸಾರ.ಕೈವಾರ ತಾತಯ್ಯನವರ ಪದಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಸಂಸದರಾದ ಮಲ್ಲೇಶ್, ಎಡಿಜಿಪಿ ದೇವರಾಜ್, ಜೆಡಿಎಸ್ ಮುಖಂಡ ಸಿ.ಎಂ.ಆರ್ ಶ್ರೀನಾಥ್ ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್