ಕುರಿಗಾಯಿಗಳಿಗೆ ಭದ್ರತೆ ಒದಗಿಸಲು ಮುಖ್ಯ ಕಾರ್ಯದರ್ಶಿಗಳಿಗೆ ರವೀಂದ್ರನಾಥ್ ಮನವಿ
ಕುರಿಗಾಯಿಗಳ ಸಮಗ್ರ ಭದ್ರತೆ ಒದಗಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರವೀಂದ್ರನಾಥ್ ಮನವಿ
ರಾಜ್ಯದ ಕುರಿಗಾಯಿಗಳಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ಕೋಲಾರದ ರವೀಂದ್ರನಾಥ್ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ.


ಕೋಲಾರ ೦೩ ಮಾರ್ಚ್ (ಹಿ.ಸ):

ಆ್ಯಂಕರ್ : ಕಲಬುರಗಿ ಜಿಲ್ಲೆಯ ಖಜೂರಿ ಗ್ರಾಮದಲ್ಲಿ ವಲಸೆ ಕುರಿಗಾಯಿಯ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಮತ್ತು ಕುರಿಗಾಯಿಗಳ ಸಮಗ್ರ ಭದ್ರತೆಗೆ ಒತ್ತಾಯಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕೋಲಾರದ ಗೌರಿಪೇಟೆಯ ಸಾಮಾಜಿಕ ಕಾರ್ಯಕರ್ತ ಕೆ.ಎನ್.ರವೀಂದ್ರನಾಥ್ ಮತ್ತು ನಿವೃತ್ತ ಬ್ಯಾಂಕ್ ಉದ್ಯೋಗಿ ಹೆಚ್.ನಾರಾಯಣಸ್ವಾಮಿ ರವರಿಗೆ ಮನವಿಯನ್ನು ಸಲ್ಲಿಸಿದರು.

ಉತ್ತರ ಕರ್ನಾಟಕದ ಸಾಂಪ್ರದಾಯಿಕ ಕೃಷಿ ಭೂಮಿಕೆಯಲ್ಲಿ, ವಿಶೇಷವಾಗಿ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ, ಕೃಷಿ ಮತ್ತು ಪಶುಸಂಗೋಪನೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಶತಮಾನಗಳಿಂದಲೂ ಈ ಭಾಗದಲ್ಲಿ ಅಲೆಮಾರಿ ಮತ್ತು ವಲಸೆ ಕುರಿಗಾಯಿಗಳ ಸಮುದಾಯಗಳು ತಮ್ಮ ಜೀವನೋಪಾಯಕ್ಕಾಗಿ ಕೃಷಿ ಭೂಮಿಯನ್ನೇ ಅವಲಂಬಿಸಿವೆ. ಸುಗ್ಗಿ ಕಾಲ ಮುಗಿದ ನಂತರ ಹೊಲಗಳಲ್ಲಿ ಉಳಿಯುವ ಬೆಳೆಯ ಅವಶೇಷಗಳು ಅಥವಾ 'ತೊಗರಿ ಕಡ್ಡಿ' ಕುರಿಗಳಿಗೆ ಪ್ರಮುಖ ಆಹಾರ ಮೂಲವಾಗುತ್ತವೆ. ಪ್ರತಿಯಾಗಿ, ಕುರಿಗಳ ಹಿಕ್ಕೆಗಳು ಭೂಮಿಗೆ ನೈಸರ್ಗಿಕ ಗೊಬ್ಬರವಾಗಿ ಪರಿಣಮಿಸುತ್ತವೆ. ಈ ಪೂರಕ ಸಂಬAಧವು ಇತ್ತೀಚಿನ ವರ್ಷಗಳಲ್ಲಿ ಸಂಪನ್ಮೂಲಗಳ ಕೊರತೆ, ಭೂಮಿಯ ವಾಣಿಜ್ಯೀಕರಣ ಮತ್ತು ಸಾಮಾಜಿಕ ಅಸ್ಥಿರತೆಯಿಂದಾಗಿ ಸಂಘರ್ಷದ ಹಾದಿ ಹಿಡಿದಿದೆ. ಉತ್ತರ ಕರ್ನಾಟಕದ ಗ್ರಾಮೀಣ ಅರ್ಥವ್ಯವಸ್ಥೆಯ ಬೆನ್ನೆಲುಬಾಗಿರುವ ಪಶುಪಾಲಕರು ಮತ್ತು ವಲಸೆ ಕುರಿಗಾಯಿಗಳ ಸದ್ಯದ ಅಸುರಕ್ಷಿತ ಸ್ಥಿತಿಯ ಕುರಿತು ಈ ಪತ್ರದ ಮೂಲಕ ತಮ್ಮ ಗಮನ ತರಬಯಸುತ್ತೇನೆ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಫೆಬ್ರವರಿ ೧೧, ೨೦೨೬ ರಂದು ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದ ಘಟನೆಯು ಕುರಿಗಾಯಿಗಳ ಅಸುರಕ್ಷಿತ ಸ್ಥಿತಿಯನ್ನು ಜಗತ್ತಿಗೆ ತೋರಿಸಿದೆ. ವಿಜಯಪುರ ಜಿಲ್ಲೆಯ ಮಾನೆದ ದೊಡ್ಡಿ ಗ್ರಾಮದ ನಿವಾಸಿಯಾದ ಪಾಂಡು ಬಿನ್ ಅರ್ಜುನ್ ಸುಳ್ಳೆ (೩೮) ಎಂಬ ಕುರಿಗಾಯಿಯು ತನ್ನ ಕುರಿಗಳನ್ನು ಮೇಯಿಸುತ್ತಾ ಖಜೂರಿ ಗ್ರಾಮದ ಸುಧೀರ್ ಬಿನ್ ಪ್ರಕಾಶ್ ವಾರಿಕ್ ಎಂಬುವರ ತೊಗರಿ ಹೊಲಕ್ಕೆ ಬಂದಿದ್ದರು. ತೊಗರಿ ಬೆಳೆ ಕಟಾವಿನ ನಂತರ ಹೊಲದಲ್ಲಿ ಕುರಿಗಳನ್ನು ಬಿಡುವ ವಿಚಾರವಾಗಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ಸಣ್ಣ ವಿವಾದವು ಅಂತಿಮವಾಗಿ ಮಾರಣಾಂತಿಕ ದಾಳಿಯಲ್ಲಿ ಪರ್ಯವಸಾನಗೊಂಡಿತು ಎಂದಿದ್ದಾರೆ.

ಆರೋಪಿ ಸುಧೀರ್ ಪ್ರಕಾಶ್ ವಾರಿಕ್ ಎಂಬಾತನು ಪಾಂಡು ಅವರ ಮೇಲೆ ಮಚ್ಚಿನಂತಹ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ್ದಾನೆ. ಕೃಷಿ ತ್ಯಾಜ್ಯದ ಮೇಲಿನ ಹಕ್ಕಿಗಾಗಿ ನಡೆದ ಈ ಹಲ್ಲೆಯು, ಗ್ರಾಮೀಣ ಭಾಗದಲ್ಲಿ ಭೂಮಿ ಮತ್ತು ಮೇವಿನ ಮೇಲಿನ ಒಡೆತನದ ಪ್ರಶ್ನೆ ಎಷ್ಟು ಸಂಕೀರ್ಣವಾಗಿದೆ ಎಂಬುದನ್ನು ಬಿಂಬಿಸುತ್ತದೆ. ಆಳಂದ ಪೊಲೀಸರು ಘಟನೆಯ ಗಂಭೀರತೆಯನ್ನು ಪರಿಗಣಿಸಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆಯು ವಲಸೆ ಕುರಿಗಾಯಿಗಳು ಎದುರಿಸುತ್ತಿರುವ ಭೌತಿಕ ಅಪಾಯಗಳನ್ನು ಎತ್ತಿ ತೋರಿಸುವುದಲ್ಲದೆ, ಅವರ ಹಕ್ಕುಗಳ ಬಗ್ಗೆ ಸ್ಥಳೀಯರಲ್ಲಿರುವ ಅಸಡ್ಡೆಯನ್ನು ಪ್ರತಿಬಿಂಬಿಸುತ್ತದೆ.

ಸಾಂಪ್ರದಾಯಿಕವಾಗಿ ರೈತರು ಮತ್ತು ಕುರಿಗಾಯಿಗಳ ನಡುವೆ ಇದ್ದ ಪೂರಕ ಸಂಬAಧವು ಇಂದು ಕೃಷಿ ತ್ಯಾಜ್ಯದ ವಾಣಿಜ್ಯೀಕರಣದಿಂದಾಗಿ ಸಂಘರ್ಷಕ್ಕೆ ತಿರುಗುತ್ತಿದೆ. ವಲಸೆ ಹೋಗುವ ಕುರಿಗಾಯಿಗಳು ರಾತ್ರಿ ವೇಳೆ ಬಯಲು ಪ್ರದೇಶಗಳಲ್ಲಿ ತಂಗುವುದರಿAದ ಮಾನವ ನಿರ್ಮಿತ ಹಲ್ಲೆಗಳು ಮತ್ತು ಚಿರತೆಯಂತಹ ವನ್ಯಜೀವಿಗಳ ದಾಳಿಗೆ ತುತ್ತಾಗುತ್ತಿದ್ದಾರೆ. ಇತ್ತೀಚೆಗೆ ಜೀವರಗಿ ತಾಲ್ಲೂಕಿನ ರೇವನೂರಿನಲ್ಲಿ ನಡೆದ ಚಿರತೆ ದಾಳಿಯೇ ಇದಕ್ಕೆ ಸಾಕ್ಷಿ. ನಮ್ಮ ಸರ್ಕಾರವು ಜಾರಿಗೆ ತಂದಿರುವ ಕರ್ನಾಟಕ ಸಾಂಪ್ರದಾಯಿಕ ವಲಸೆ ಕುರಿಗಾಯಿಗಳ (ಕಲ್ಯಾಣ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧ ರಕ್ಷಣೆ) ಕಾಯ್ದೆ ೨೦೨೫ ಕುರಿತು ಗ್ರಾಮೀಣ ಮಟ್ಟದಲ್ಲಿ ಇನ್ನೂ ಪೂರ್ಣ ಪ್ರಮಾಣದ ಜಾಗೃತಿ ಮೂಡಿಲ್ಲ ಎಂದರು.

ಖಜೂರಿ ಘಟನೆಯ ಆರೋಪಿಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತ ಕುರಿಗಾಯಿಗೆ ಸರ್ಕಾರದಿಂದ ಸೂಕ್ತ ವೈದ್ಯಕೀಯ ನೆರವು ಹಾಗೂ ಆರ್ಥಿಕ ಪರಿಹಾರ ನೀಡಬೇಕು. ೨೦೨೫ರ ಕಾಯ್ದೆಯನ್ವಯ ರಾಜ್ಯದ ಎಲ್ಲಾ ವಲಸೆ ಕುರಿಗಾಯಿಗಳಿಗೆ ತಕ್ಷಣವೇ ಡಿಜಿಟಲ್ ಗುರುತಿನ ಚೀಟಿ ವಿತರಿಸಬೇಕು ಮತ್ತು ಅವರ ಮೇಯಿಸುವ ಹಕ್ಕನ್ನು ರಕ್ಷಿಸಬೇಕು.ಕುರಿಗಾಯಿಗಳು ವಲಸೆ ಹೋಗುವ ಮಾರ್ಗಗಳಲ್ಲಿ ಮತ್ತು ಹೆಚ್ಚು ಕುರಿ ಪಟ್ಟಿಗಳು ಇರುವ ಪ್ರದೇಶಗಳಲ್ಲಿ ರಾತ್ರಿ ವೇಳೆ ಪೊಲೀಸ್ ಗಸ್ತನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೃಷಿ, ಅರಣ್ಯ ಮತ್ತು ಪಶುಸಂಗೋಪನಾ ಇಲಾಖೆಗಳ ಸಮನ್ವಯ ಸಮಿತಿ ರಚಿಸಿ, ವಲಸೆ ಕಾಲದಲ್ಲಿ ಕುರಿಗಾಯಿಗಳಿಗೆ ಆಗುವ ತೊಂದರೆಗಳನ್ನು ನಿವಾರಿಸಬೇಕು.ಯಾವುದೇ ದಾಳಿ ಅಥವಾ ಅನಿವಾರ್ಯ ಸಂಘರ್ಷದ ಸಂದರ್ಭದಲ್ಲಿ ಸಂತ್ರಸ್ತ ಕುರಿಗಾಯಿಗಳಿಗೆ ಶೀಘ್ರವಾಗಿ ವೈದ್ಯಕೀಯ ನೆರವು ಮತ್ತು ವಿಮಾ ಪರಿಹಾರ ದೊರಕಿಸಿಕೊಡುವ ವ್ಯವಸ್ಥೆ ಜಾರಿಯಾಗಬೇಕು.ಯಾವುದೇ ಕುರಿಗಾಯಿಯು ಹಲ್ಲೆಗೊಳಗಾದಾಗ ಅವರಿಗೆ ನ್ಯಾಯಾಲಯದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಬೇಕು.ಪ್ರತಿ ಗ್ರಾಮ ಪ್ರಂಚಾಯಿಗೆ ಒಂದರಂತೆ ಬಿಡಾರಗಳ ವ್ಯವಸ್ಥೆಯನ್ನು ಮಾಡಲು ಸಂಬAಧಪಟ್ಟ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕುರಿಗಾಯಿಗಳ ಹಿತರಕ್ಷಣೆಗಾಗಿ ಸದಾ ಶ್ರಮಿಸುವ ತಾವು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದಾದ್ಯಂತ ಇರುವ ಲಕ್ಷಾಂತರ ಕುರಿಗಾಯಿ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande