ಐಪಿಎಲ್ 2026 ಉದ್ಘಾಟನಾ ಪಂದ್ಯ: ಆರ್ಸಿಬಿಗೆ ಭರ್ಜರಿ ಜಯ, ಕೊಹ್ಲಿ-ಪಡಿಕ್ಕಲ್ ಸ್ಫೋಟಕ ಆಟ
ಬೆಂಗಳೂರು, 28 ಮಾರ್ಚ್ (ಹಿ.ಸ.): ಆ್ಯಂಕರ್:ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಗೆ ಶನಿವಾರ ಭರ್ಜರಿ ಚಾಲನೆ ದೊರೆತಿದ್ದು, ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 6 ವಿಕೆಟ್‌ಗಳ ಸುಲಭ ಜಯ ಸಾಧಿಸಿ ಶುಭಾರಂಭ ಮಾಡಿದೆ. 202 ರನ್‌ಗ
IPL RCB win


ಬೆಂಗಳೂರು, 28 ಮಾರ್ಚ್ (ಹಿ.ಸ.):

ಆ್ಯಂಕರ್:ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಗೆ ಶನಿವಾರ ಭರ್ಜರಿ ಚಾಲನೆ ದೊರೆತಿದ್ದು, ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 6 ವಿಕೆಟ್‌ಗಳ ಸುಲಭ ಜಯ ಸಾಧಿಸಿ ಶುಭಾರಂಭ ಮಾಡಿದೆ.

202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿದದ್ದು ಗಮನಾರ್ಹ. ತಂಡದ ಪರ ದೇವದತ್ ಪಡಿಕ್ಕಲ್ (61) ಹಾಗೂ ವಿರಾಟ್ ಕೊಹ್ಲಿ (69*) ಅರ್ಧಶತಕ ಸಿಡಿಸಿ ಗೆಲುವಿನ ರೂವಾರಿಯಾದರು.

ಹೈದರಾಬಾದ್‌ಗೆ ಆರಂಭಿಕ ಆಘಾತ, ಕಿಶನ್ ಸಿಡಿಲಾಟ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಕೇವಲ 29 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಇಶಾನ್ ಕಿಶನ್ ಭದ್ರತೆ ನೀಡಿದರು. ಅವರು 38 ಎಸೆತಗಳಲ್ಲಿ 80 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.

ಇವರಿಗೆ ಹೆನ್ರಿಚ್ ಕ್ಲಾಸೆನ್ (31) ಮತ್ತು ಅನಿಕೇತ್ ವರ್ಮಾ (43) ಉತ್ತಮ ಬೆಂಬಲ ನೀಡಿದರು. ಪರಿಣಾಮವಾಗಿ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿತು.

ಆರ್‌ಸಿಬಿ ಬೌಲರ್‌ಗಳ ಮಿಂಚಿನ ಪ್ರದರ್ಶನ

ಆರ್‌ಸಿಬಿ ಪರ ಜಾಕೋಬ್ ಡಫಿ 4 ಓವರ್‌ಗಳಲ್ಲಿ 22 ರನ್ ನೀಡಿ 3 ವಿಕೆಟ್ ಕಬಳಿಸಿ ಗಮನ ಸೆಳೆದರು. ರೊಮಾರಿಯೋ ಶೆಫರ್ಡ್ ಕೂಡ 3 ವಿಕೆಟ್ ಪಡೆದು ಬೌಲಿಂಗ್‌ನಲ್ಲಿ ಮಿಂಚಿದರು. ಉಳಿದಂತೆ ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ ಮತ್ತು ಅಭಿನಂದನ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.

ಆರ್‌ಸಿಬಿ ದಾಳಿ: ಕೊಹ್ಲಿ-ಪಡಿಕ್ಕಲ್ ಶೋ

ಬೃಹತ್ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಆರಂಭದಿಂದಲೇ ದಿಟ್ಟ ಆಟ ಕಂಡುಬಂತು. ಪಡಿಕ್ಕಲ್ ಮತ್ತು ಕೊಹ್ಲಿ ಜೋಡಿ ವೇಗವಾಗಿ ರನ್‌ಗಳನ್ನು ಕಲೆಹಾಕಿ ಪಂದ್ಯವನ್ನು ಏಕಪಕ್ಷೀಯಗೊಳಿಸಿದರು. ಕೊಹ್ಲಿ ಅಜೇಯ 69 ರನ್‌ಗಳೊಂದಿಗೆ ತಂಡವನ್ನು ಗೆಲುವಿನ ತುದಿಗೆ ಕೊಂಡೊಯ್ದರು.

ಶುಭಾರಂಭ ಮಾಡಿದ ಚಾಂಪಿಯನ್ಸ್

ಹಾಲಿ ಚಾಂಪಿಯನ್ ಆಗಿರುವ ಆರ್‌ಸಿಬಿ ತಂಡ ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಆತ್ಮವಿಶ್ವಾಸದ ಶುಭಾರಂಭ ಮಾಡಿದೆ. ಮತ್ತೊಂದೆಡೆ, ಉತ್ತಮ ಸ್ಕೋರ್ ಗಳಿಸಿದ್ದರೂ ಬೌಲಿಂಗ್ ವೈಫಲ್ಯದಿಂದ ಹೈದರಾಬಾದ್ ತಂಡ ಸೋಲು ಅನುಭವಿಸಬೇಕಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande