
ಕೋಲಾರ, ೨೫ ಮಾರ್ಚ್ (ಹಿ.ಸ.):
ಆ್ಯಂಕರ್ ; ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ದಲಿತರ ಸಬಲೀಕರಣದ ಯೋಜನೆಗಳನ್ನು ಅನುಷ್ಠಾನ ಮಾಡುವ ಪ್ರಮುಖ ಇಲಾಖೆಯಾಗಿದೆ. ದಲಿತರ ಸಬಲೀಕರಣಕ್ಕಾಗಿ ಸರ್ಕಾರ ಪ್ರತಿವರ್ಷ ಸಾವಿರಾರು ಕೋಟಿ ರೂಗಳನ್ನು ಬಿಡುಗಡೆ ಮಾಡುತ್ತದೆ. ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಯ ಹುದ್ದೆಯನ್ನು ಮೇಲ್ದರ್ಜೆಗೇರಿಸಿ ಜಂಟಿ ನಿರ್ದೇಶಕರ ಹುದ್ದೆಯನ್ನು ಸರ್ಕಾರ ಮಂಜೂರು ಮಾಡಿದೆ.ಆದರೆ ಇದುವರೆಗೂ ಪೂರ್ಣ ಪ್ರಮಾಣದ ಅಧಿಕಾರಿಯ ನೇಮಕವಾಗಿಲ್ಲ. ಜಂಟಿ ನಿರ್ದೇಶಕರ ಅಧಿಕಾರಿಂ ಬದಲು ಹಂಗಾಮಿ ಅಧಿಕಾರಿಗಳು ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. ಹಾಲಿ ಹಂಗಾಮಿ ಅಧಿಕಾರಿ ಎಂ. ಶ್ರೀನಿವಾಸನ್ ಮೂಲತಃ ಶ್ರೀನಿವಾಸಪುರ ತಾಲ್ಲುಕು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದಾರೆ. ಖಾಲಿ ಇದ್ದ ಜಂಟಿ ನಿರ್ದೇಶಕರ ಹುದ್ದೆಗೆ ಸರ್ಕಾರ ಇವರನ್ನು ನೇಮಕ ಮಾಡಿಲ್ಲ. ಪ್ರಭಾವ ಬೀರಿ ಕಳೆದ ಎರಡು ವರ್ಷಗಳಿಂದ ಜಂಟಿ ನಿರ್ದೇಶಕರ ಹುದ್ದೆಯಲ್ಲಿ ಮುಂದುವರೆದಿದ್ದಾರೆ. ಖಾಲಿ ಇದ್ದ ಹುದ್ದೆಗೆ ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಂಗಾಮಿಯಾಗಿ ಪ್ರಭಾರ ವಹಿಸಿಕೊಳ್ಳಲು ಆದೇಶ ಹೊರಡಿಸಿದ್ದರು.
ಈ ಹಿಂದೆ ಶ್ರೀನಿವಾಸಪುರ ತಾಲ್ಲೂಕು ಪಂಚಾಯಿತಿ ಅಧಿಕಾರಿಯಾಗಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.ತೋಟಗಾರಿಕಾ ಇಲಾಖೆಯಲ್ಲಿ ಸಾಕಷ್ಟು ಕೆಲಸವಿದ್ದರು ಸಹ ಸಮಾಜ ಕಲ್ಯಾಣ ಇಲಾಖೆ ಹುಲ್ಲುಗಾವಲು ಆಗಿರುವ ಕಾರಣ ಇಲ್ಲೇ ಮುಂದುವರೆದಿದ್ದಾರೆ. ಸರ್ಕಾರ ಈ ತಿಂಗಳ ೧೮ ರಂದು ಜಂಟಿ ನಿರ್ದೇಶಕರಾಗಿ ಶಿವಾನಂದ ಕಂಬಾರ ಅವರನ್ನು ಸರ್ಕಾರ ನೇಮಕ ಮಾಡಿದೆ. ಮುಖ್ಯಮಂತ್ರಿಗಳು ಈ ನೇಮಕಾತಿಗೆ ಅನುಮೋದನೆ ನೀಡಿದ್ದಾರೆ. ಆದರೆ ಇದುವರೆಗೂ ಅಧಿಕಾರಿ ವರದಿ ಮಾಡಿಕೊಂಡಿಲ್ಲ. ಅವರು ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಸತಿ ಶಿಕ್ಷಣ ಶಾಲೆಗಳ ಸಂಘದಲ್ಲಿ ಮೊದಲನೇ ದರ್ಜೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂಲತಃ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದಾರೆ.
ಈ ಹಿಂದೆ ಬಸವಣಪ್ಪ ಹಂಗಾಮಿಯಾಗಿ ಕಾರ್ಯನಿರ್ವಹಿಸಿದ್ದರು.ಅವರು ಜಂಟಿ ನಿರ್ದೇಶಕರ ವೃಂದವರಲ್ಲ. ಸಹಾಯಕ ನಿರ್ದೇಶಕರಾಗಿದ್ದವರು. ಪ್ರಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಶಿಕ್ಷಣ ಇಲಾಖೆಯಲ್ಲಿ ಶಿಕ್ಚಣಾಧೀಕಾರಿಯಾಗಿದ್ದ ಬಾಲಾಜಿ ಹಂಗಾಮಿಯಾಗಿ ಜಂಟಿ ನಿರ್ದೇಶಕರಾಗಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಏಳು ವರ್ಷಗಳ ಕಾಲ ಕೋಲಾರ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸದ್ದರು. ಹಿಂದಿನ ಸಂಸದ ಮುನಿಶಾಮಿಯವರ ಕೆಂಗಣ್ಣಿಗೆ ಗುರಿಯಾಗಿ ಹುದ್ದೆಯಿಂದ ಬಿಡುಗಡೆಯಾದರು. ಈಗ ಡಯಟ್ನಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಿ.ಕೆ ರವಿ ಜಿಲ್ಲಾಧಿಕಾರಿಯಾಗಿದ್ದಾಗ ಶಿವಕುಮಾರ್ ಎಂಬುವರು ಪೂರ್ಣಾವಧಿ ಅಧಿಕಾರಿಯಾಗಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿದ್ದರು.ಅವರನಂತರ ಬಹುತೇಕ ಅಧಿಕಾರಿಗಳು ಹಂಗಾಮಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಲಿ ಜಂಟಿ ನಿರ್ದೇಶಕರನ್ನು ಮುಖ್ಯ ಮಂತ್ರಿಗಳ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ.ಆದರೆ ಅಧಿಕಾರಿ ಇದುವರೆಗು ಕೋಲಾರದ ಕಡೆ ತಿರುಗಿ ನೋಡಿಲ್ಲ. ಕೋಲಾರ ಜಿಲ್ಲೆಗೆ ನೇಮಕ ಮಾಡಿರುವ ಆದೇಶವನ್ನು ರದ್ದುಪಡಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಿಗೆ ದುಂಬಾಲು ಬಿದ್ದಿರುವುದಾಗಿ ತಿಳಿದು ಬಂದಿದೆ. ಕೋಲಾರ ಜಿಲ್ಲೆಯಲ್ಲಿ ಕೆಲಸ ಮಾಡಲು ಹಿಂದೇಟು ಹಾಕಿದ್ದಾರೆ. ಇಲಾಖೆಯನ್ನು ನಿಬಾಯಿಸುವುದು ಒಂದು ಕೆಲಸವಾದರೆ ಸಂಘಟನೆಗಳನ್ನು ನಿಭಾಯಿಸುವುದು ಮತ್ತೊಂದು ಕೆಲಸ ಆಗಿದೆ. ಸಣ್ಣ ಸಣ್ಣ ವಿಷಯಕ್ಕೆ ಕೋಲಾರದಲ್ಲಿ ಪ್ರತಿಭಟನೆಗಳು ನಡೆಯುತ್ತವೆ. ಅಲ್ಲಿ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಕೋಲಾರಕ್ಕೆ ನೇಮಕಾತಿ ಮಾಡಿರುವ ಆದೇಶವನ್ನು ರದ್ದು ಮಾಡುವಂತೆ ಶಿವಾನಂದ ಕಂಬಾರ್ ರವರು ವಿಧಾನಸೌಧದಲ್ಲಿ ಸುತ್ತಾಡುತ್ತಿದ್ದಾರೆ ಎಂದು ಇಲಾಖೆಯ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಇದರಿಂದಾಗಿ ಹಂಗಾಮಿ ಅಧಿಕಾರಿಗಳೇ ಸಮಾಜ ಕಲ್ಯಾಣ ಇಲಾಖೆಯನ್ನು ನಿರ್ವಹಿಸಬೇಕಾಗಿದೆ. ಹಾಲಿ ಜಂಟಿ ನಿರ್ದೇಶಕರ ಪ್ರಭಾರವನ್ನು ನಿರ್ವಹಿಸುತ್ತಿರುವ ಶ್ರೀನಿವಾಸನ್ ಮುಂದಿನ ಎರಡೂವರೆ ವರ್ಷದಲ್ಲಿ ನಿವೃತ್ತಿ ಆಗಲಿದ್ದಾರೆ. ಅದುವರೆಗೂ ಅವರೇ ಮುಂದುವರೆಯಲಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್