
ವಿಜಯಪುರ, 28 ಮಾರ್ಚ್ (ಹಿ.ಸ.)
ಆ್ಯಂಕರ್ : ಎಸ್ಐಆರ್ ಪ್ರಕ್ರಿಯೆ ಗೊಂದಲದ ಗೂಡಾಗಿದ್ದು, ಅವೈಜ್ಞಾನಿಕ ಹಾಗೂ ತರ್ಕಹೀನ ನಿಯಮಾವಳಿಗಳಿಂದ ನಾಗರಿಕರ ನಾಗರಿಕತ್ವವೇ ಪ್ರಶ್ನೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಅಸಮಾಧಾನ ವ್ಯಕ್ತಪಡಿಸಿದರು.
ವಿಜಯಪುರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗರಿಕನ ನಾಗರಿಕತ್ವ ರದ್ದುಗೊಳಿಸುವುದು ಮರಣ ಶಾಸನಕ್ಕಿಂತಲೂ ಘೋರವಾದ ವಿಷಯ. ಈ ಕುರಿತು ಮಹತ್ವದ ಹೆಜ್ಜೆ ಇಟ್ಟು ಧ್ವನಿ ಎತ್ತಬೇಕಾದ ರಾಜ್ಯ ಸರ್ಕಾರ ಕೇವಲ ಕಾನೂನಾತ್ಮಕ ಸಲಹೆ ಪಡೆಯುವುದಾಗಿ ಹೇಳಿ ಕಾಲ ಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ಈ ವಿಷಯದಲ್ಲಿ ಜನಪ್ರತಿನಿಧಿಗಳೂ ಗಮನ ಹರಿಸುತ್ತಿಲ್ಲ. ಎಸ್ಐಆರ್ ಪ್ರಕ್ರಿಯೆಯಲ್ಲಿರುವ ಗೊಂದಲ ನಿವಾರಣೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸರ್ಕಾರ ಮಾಡಬೇಕು. ಆದರೆ ರಾಜ್ಯ ಸರ್ಕಾರ ಈ ವಿಷಯದಲ್ಲಿ ಉದಾಸೀನ ನೀತಿ ಅನುಸರಿಸುತ್ತಿದೆ. ಕಾನೂನು ಸಲಹೆ ಪಡೆಯಲು ಇನ್ನೆಷ್ಟು ದಿನ ಬೇಕು ಎಂದು ಪ್ರಶ್ನಿಸಿದರು.
ಮತ ಪಟ್ಟಿಯಿಂದ ನೋಬೆಲ್ ಪುರಸ್ಕೃತರು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ಹೆಸರುಗಳೇ ಮಾಯವಾಗಿರುವ ಉದಾಹರಣೆಗಳಿರುವಾಗ ಸಾಮಾನ್ಯ ಜನರ ಗತಿಯೇನು ಎಂಬ ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಒಡೆದಾಳುವ ನೀತಿಯ ಭಾಗವಾಗಿ ಎಸ್ಐಆರ್ ಮೂಲಕ ಮುಸ್ಲಿಂರ ನಾಗರಿಕತ್ವದ ಮೇಲೆ ಪ್ರಹಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಉತ್ತರ ಕರ್ನಾಟಕ ಭಾಗದ ಅನೇಕರು ಉದ್ಯೋಗಕ್ಕಾಗಿ ಮಹಾರಾಷ್ಟ್ರ, ಗೋವಾ, ಗುಜರಾತ್ ರಾಜ್ಯಗಳಿಗೆ ಗುಳೇ ಹೋಗುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಹಲವರು ಮತದಾನದಿಂದ ವಂಚಿತರಾಗುತ್ತಿದ್ದಾರೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ವಿಧಿಸಿರುವ ಕೆಲವು ನಿಯಮಗಳು ತರ್ಕಹೀನವಾಗಿದ್ದು, ಇದರಿಂದ ಅನೇಕರು ನಾಗರಿಕತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಹೇಳಿದರು.
ಚುನಾವಣಾ ಆಯೋಗಕ್ಕೆ ನಾಗರಿಕತ್ವ ನಿರ್ಧರಿಸುವ ಅಧಿಕಾರವಿಲ್ಲ. ಮತದಾರ ಪಟ್ಟಿಗೆ ಹೆಸರು ಸೇರಿಸುವುದು ಅಥವಾ ತೆಗೆಯುವುದು ಮಾತ್ರ ಅದರ ಅಧಿಕಾರದ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಈ ಬಗ್ಗೆ ಜನರಲ್ಲಿ ಉಂಟಾಗಿರುವ ಆತಂಕ ನಿವಾರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರಾಷ್ಟ್ರಮಟ್ಟದ ತನಿಖೆಗೆ ಒತ್ತಾಯಿಸಿದ ಅವರು ಚುನಾವಣಾ ಆಯೋಗದ ಕಚೇರಿ ದಾಖಲೆ ಹಾಳೆಯ ಮೇಲೆ ಬಿಜೆಪಿ ಪಕ್ಷದ ಚಿಹ್ನೆ ಕಾಣಿಸಿಕೊಂಡಿರುವ ವಿಷಯ ಗಂಭೀರವಾಗಿದೆ. ಅದು ಕಣ್ಣು ತಪ್ಪಿ ನಡೆದಿದ್ದರೂ, ಆಯೋಗದ ದಾಖಲೆಗಳಲ್ಲಿ ಬಿಜೆಪಿ ಚಿಹ್ನೆ ಇರಲು ಕಾರಣವೇನು ಎಂಬುದರ ಕುರಿತು ರಾಷ್ಟ್ರಮಟ್ಟದಲ್ಲಿ ಉನ್ನತ ತನಿಖೆ ನಡೆಸಬೇಕು ಎಂದು ಎಸ್.ಎಂ. ಪಾಟೀಲ ಗಣಿಹಾರ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಹಿಂದ ಮುಖಂಡರಾದ ಡಾ. ರವಿಕುಮಾರ ಬಿರಾದಾರ, ನಾಗರಾಜ್ ಲಂಬು, ಫಯಾಜ್ ಕಲಾದಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande