
ಬಾಗಲಕೋಟೆ, 28 ಮಾರ್ಚ್ (ಹಿ.ಸ.):
ಆ್ಯಂಕರ್ : ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳು ಮಾಡಿರುವ ಅಪಖ್ಯಾತಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಬಾಗಲಕೋಟೆ ಉಪಚುನಾವಣೆ ಪ್ರಚಾರದ ವೇಳೆ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ವಾರ್ಷಿಕ ₹18 ಸಾವಿರ ಕೋಟಿ ನೀಡುವುದಾಗಿ ಹೇಳಿದ ಸರ್ಕಾರ, ಬಜೆಟ್ನಲ್ಲಿ ಕೇವಲ ₹3 ಸಾವಿರ ಕೋಟಿ ಮಾತ್ರ ಮೀಸಲಿಟ್ಟಿದೆ. ಇದರಿಂದ ಈ ಭಾಗದ ಜನತೆಗೆ ಅನ್ಯಾಯವಾಗಿದೆ. ಇದು ಕ್ಷಮೆಗೆ ಅರ್ಹವಲ್ಲ ಎಂದು ವಾಗ್ದಾಳಿ ನಡೆಸಿದರು.
ಬಾಗಲಕೋಟೆ ಉಪಚುನಾವಣೆ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾದ ಹಿನ್ನೆಲೆಯಲ್ಲಿ ನಡೆಯುತ್ತಿದೆ. 2023ರ ಚುನಾವಣೆಯಿಂದ ಇಂದಿನವರೆಗೆ ರಾಜಕೀಯ ಪರಿಸ್ಥಿತಿಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಸರ್ಕಾರದ ಬಗ್ಗೆ ಜನರ ನಿರೀಕ್ಷೆಗಳು ಹುಸಿಯಾಗಿದ್ದು ಭ್ರಮ ನಿರಸನವಾಗಿದೆ. ಕೋವಿಡ್ ಸಮಯದಲ್ಲೂ ನಾವು ರಾಜ್ಯದ ಆರ್ಥಿಕ ಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟಿದ್ದೇವು. ಆದರೆ ಈ ಸರ್ಕಾರ ಸುಮಾರು ನಾಲ್ಕು ಲಕ್ಷ ಕೋಟಿ ರೂ. ಸಾಲ ಮಾಡಿದ್ದು, ಇನ್ನೂ ಮೂರು ಬಜೆಟ್ ಮಂಡಿಸಿದರೆ ರಾಜ್ಯದ ಮೇಲೆ ಆರರಿಂದ ಏಳು ಲಕ್ಷ ಕೋಟಿ ರೂ. ಸಾಲದ ಭಾರ ಬೀಳಲಿದೆ ಎಂದು ಹೇಳಿದರು.
ಕೇಂದ್ರದಿಂದ ಹೆಚ್ಚಿನ ಅನುದಾನ
14ನೇ ಹಣಕಾಸು ಆಯೋಗದ ಅವಧಿಯಲ್ಲಿ ಯುಪಿಎ ಸರ್ಕಾರ ನೀಡಿದ ಅನುದಾನಕ್ಕಿಂತ 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಎನ್ಡಿಎ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಿದೆ. ರೈಲ್ವೆ ಯೋಜನೆಗಳಿಗೆ ಯುಪಿಎ ಅವಧಿಯಲ್ಲಿ ₹700 ಕೋಟಿ ನೀಡಲಾಗುತ್ತಿತ್ತು, ಈಗ ₹7 ಸಾವಿರ ಕೋಟಿ ನೀಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಹೆಚ್ಚಿನ ಅನುದಾನ ದೊರೆತಿದೆ. ಜಿಎಸ್ಟಿ ದರ ಇಳಿಕೆಯಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಪ್ರಧಾನಿ ಸಭೆಗೆ ಹಾಜರಾಗದ ಸಿಎಂ
ಜಲ ಜೀವನ ಮಿಷನ್ ಸೇರಿದಂತೆ ಹಲವು ಯೋಜನೆಗಳಿಗೆ ರಾಜ್ಯದ ಪಾಲಿನ ಹಣ ನೀಡಿಲ್ಲ. ಕೇಂದ್ರ ಸರ್ಕಾರ, ದೇಶದ ಆರ್ಥಿಕ ಪರಿಸ್ಥಿತಿ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳ ಸಭೆ ಕರೆದಾಗ ಸಿಎಂ ಸಿದ್ದರಾಮಯ್ಯ ಹಾಜರಾಗದೆ ಮಂತ್ರಿಗಳನ್ನು ಕಳುಹಿಸುವ ಮೂಲಕ ಉದ್ದಟತನ ತೋರಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಲವು ಪ್ರತಿಪಕ್ಷ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನ್ಯಾಯವಾಗಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಭೂಸ್ವಾಧೀನಕ್ಕೆ ಸುಮಾರು ₹75 ಸಾವಿರ ಕೋಟಿ ಅಗತ್ಯವಿದೆ ಎಂದು ಸರ್ಕಾರವೇ ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಿತ್ತು. ಆದರೆ ಬಜೆಟ್ನಲ್ಲಿ ಕೇವಲ ₹3 ಸಾವಿರ ಕೋಟಿ ಮೀಸಲಿಟ್ಟು ಜನರ ಕಣ್ಣಿಗೆ ಮಣ್ಣು ಏರಚುತ್ತಿದ್ದು, ಭೂಮಿ ಕಳೆದುಕೊಂಡ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಆರೋಪಿಸಿದರು.
ಬಾಗಲಕೋಟೆ ಅಭಿವೃದ್ಧಿ ಕುರಿತು ಮಾತನಾಡಿದ ಬೊಮ್ಮಾಯಿ, ನವನಗರಕ್ಕೆ ಕಾಂಗ್ರೆಸ್ ಸರ್ಕಾರ ಎಷ್ಟು ಅನುದಾನ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ನಾವು ಆಡಳಿತದಲ್ಲಿದ್ದಾಗ ಈ ಭಾಗಕ್ಕೆ ಹೆಚ್ಚಿನ ಅನುದಾನ ನೀಡಿದ್ದೇವೆ. ಈಗ ಚುನಾವಣೆಯ ಸಂದರ್ಭದಲ್ಲಿ ಮೆಡಿಕಲ್ ಕಾಲೇಜು ಮಾಡುವುದಾಗಿ ಹೇಳುತ್ತಿದ್ದಾರೆ. ಮೇಟಿ ಅವರು ಜೀವಂತ ಇದ್ದಾಗ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಇನ್ನು ಉಪಚುನಾವಣೆ ಬಗ್ಗೆ ಮಾತನಾಡಿದ ಅವರು,
ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದ್ದು, ಇದು ರಾಜಶಕ್ತಿ ಮತ್ತು ಪ್ರಜಾಶಕ್ತಿ ನಡುವಿನ ಹೋರಾಟವಾಗಲಿದೆ. ಜನಸಾಮಾನ್ಯರು ಹಾಗೂ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಜಯ ಸಾಧಿಸಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ ಸೇರಿದಂತೆ ಜಿಲ್ಲೆಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande