

ಬೆಂಗಳೂರು, 28 ಮಾರ್ಚ್ (ಹಿ.ಸ.):
ಆ್ಯಂಕರ್:
ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಕಳೆದ ವರ್ಷದ ಭೀಕರ ಕಾಲ್ತುಳಿತ ದುರಂತದ ಹಿನ್ನೆಲೆ ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಇಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಈ ಹಿನ್ನೆಲೆ ಕ್ರೀಡಾಂಗಣದ ಸುತ್ತಮುತ್ತ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗಿದ್ದು, ಬೆಂಗಳೂರು ನಗರ ಪೋಲಿಸ ವತಿಯಿಂದ ಸುಮಾರು 2,000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಜಾರಿಗೊಂಡಿದ್ದು, 7 ವಿಶೇಷ ದಳಗಳನ್ನು ರಚಿಸಿ ಕಣ್ಗಾವಲು ಹೆಚ್ಚಿಸಲಾಗಿದೆ. ಮಧ್ಯಾಹ್ನದಿಂದಲೇ ಪೊಲೀಸರು ತಮ್ಮ ನಿಯೋಜಿತ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ನಗರ ಪೋಲಿಸ್ ಆಯುಕ್ತ ಸೀಮಂತಕುಮಾರ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಬಾರಿ ಐಪಿಎಲ್ ಟೂರ್ನಿ ಎರಡು ತಿಂಗಳಿಗಿಂತ ಹೆಚ್ಚು ಕಾಲ ನಡೆಯಲಿದ್ದು, ಮೇ 24ರವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ಮೇ 31ರಂದು ಫೈನಲ್ ಪಂದ್ಯ ನಡೆಯಲಿದ್ದು, ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. 65 ದಿನಗಳ ಅವಧಿಯಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ.
ಕಳೆದ ವರ್ಷದ ದುರ್ಘಟನೆಗೆ ಪಾಠ ಕಲಿತಿರುವ ಆಡಳಿತ ಯಂತ್ರ, ಈ ಬಾರಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸುರಕ್ಷಿತವಾಗಿ ಪಂದ್ಯಾವಳಿ ನಡೆಸಲು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಇದೇ ವೇಳೆ ವರ್ಷದ ಕಾಲ್ತುಳಿತದಲ್ಲಿ ಮೃತಪಟ್ಟ ಆರ್ ಸಿ ಬಿ ಅಭಿಮಾನಿಗಳ ಸ್ಮರಣಾರ್ಥ ಕ್ರೀಡಾಂಗಣದಲ್ಲಿ ೧೧ ಕುರ್ಚಿಗಳನ್ನು ಖಾಲಿ ಬಿಡುವ ಮೂಲಕ ಗೌರವ ಸಲ್ಲಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ.
ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರ ಅನುಕೂಲಕ್ಕೆ ಬೆಂಗಳೂರು ಮೆಟ್ರೋ ರಾತ್ರಿ ೨ ಗಂಟೆಗಳ ವರೆಗೆ ಸಂಚಾರ ನಡೆಸಲು ತಿರ್ಮಾನಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa