
ಕೋಲಾರ, ೨೮ ಮಾರ್ಚ್ (ಹಿ.ಸ):
ಆ್ಯಂಕರ್ : ಅಂಬೇಡ್ಕರ್ ಅವರನ್ನು ವೈಚಾರಿಕ ಶಕ್ತಿಯಾಗಿ ರೂಪಾಂತರಿಸಿಕೊಂಡರೆ ಸಂವಿಧಾನ, ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಶಕ್ತಿ ಬರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮೈಸೂರಿನ ರಂಗಾಯಣ ರೆಪರ್ಟರಿ ತಂಡ ಪ್ರಸ್ತುತಪಡಿಸಿದ ತೇರಹಳ್ಳಿ ಬೆಟ್ಟದ ಪಾಪರಾಜನಹಳ್ಳಿ ಬುಡ್ಡಿದೀಪ ಸಂಸ್ಥೆಯ ಕೋಟಿಗಾನಹಳ್ಳಿ ರಾಮಯ್ಯ ರಚಿಸಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಬದುಕಿನ ಅಪರೂಪದ ಘಟನಾಸರಣಿ ಆಧಾರಿತ ಅಂಬೇಡ್ಕರ್ ಕೊಲಾಜ್ ನಾಟಕವನ್ನು ವೀಕ್ಷಿಸಿ ಮಾತನಾಡಿದರು.
ಅಂಬೇಡ್ಕರ್ ವ್ಯಕ್ತಿತ್ವಕ್ಕೆ ಚುಂಬಕ ಶಕ್ತಿ ಇದೆ, ಸೂರ್ಯ ಚಂದ್ರ ಇರುವವರೆವಿಗೂ ಅವರು ಅಜರಾಮರವಾಗಿರುತ್ತಾರೆ, ಅವರನ್ನು ಎಪ್ಪತ್ತು ವರ್ಷಗಳಿಂದಲೂ ಅರಾಧಿಸಿ, ಪ್ರೀತಿಸಿ ಗೌರವಿಸಿದ್ದು ಸಾಕು, ನಾಟಕದ ಸಂಭಾಷಣೆಯಂತೆ ಅಂಬೇಡ್ಕರ್ ಬರೆದ ಅಕ್ಷರಗಳನ್ನು ಮರೆತು ಭಾವಚಿತ್ರಕ್ಕೆ ಸೀಮಿತವಾಗಿಸುವುದು ಬಿಟ್ಟು ಈಗಲಾದರೂ ವೈಚಾರಿಕ ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳಬೇಕು, ಈ ಬದಲಾವಣೆ ಆಗದಿದ್ದರೆ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಂಬೇಡ್ಕರ್ ಕೊಲಾಜ್ ನಾಟಕದ ಸತ್ವ ಇರುವುದೇ ರಚನಾಕಾರ ಕೋಟಿಗಾನಹಳ್ಳಿ ರಾಮಯ್ಯರ ಪರಿಕಲ್ಪನೆಯಲ್ಲಿ. ಅಂಬೇಡ್ಕರ್ ನಾಟಕ ಬರೆದು ಸೃಷ್ಠಿಸಿ ಒಪ್ಪಿಸುವುದು ಕಷ್ಟದ ಕೆಲಸ. ಆದರೂ ಯುವ ಪೀಳಿಗೆಯನ್ನೂ ತಲುಪುವಂತೆ ನಾಟಕವನ್ನು ಸಂಗೀತ ಸಂಭಾಷಣೆ ಮೂಲಕ ನಿರೂಪಿಸಿರುವ ರಾಮಯ್ಯರ ಬರವಣಿಗೆಯನ್ನು ಅರ್ಥೈಸಿಕೊಂಡು ನಿರ್ದೇಶಕರು ಜಾಣ್ಮೆಯಿಂದ ನಾಟಕವನ್ನು ರೂಪಿಸಿದ್ದಾರೆ. ರಂಗಾಯಣದ ಅಪ್ರತಿಮ ಅದ್ಭುತ ಕಲಾವಿದರು ಅಂತಿರAಜನೀಯವೆನಿಸದೆ ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸಿದರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಟಕದ ಪ್ರತಿ ದೃಶ್ಯವೂ ಒಂದೊಂದು ಪ್ರತ್ಯೇಕ ನಾಟಕವಾಗಬಹುದು. ಆದರೂ ಎರಡು ಗಂಟೆಗಳ ಅವಧಿಯಲ್ಲಿ ಅಂಬೇಡ್ಕರ್ ರನ್ನು ಹಿಡಿದಿಟ್ಟಿರುವ ಕೆ.ರಾಮಯ್ಯರಿಗೆ ಸಲ್ಯೂಟ್, ಅವರು ಆಧುನಿಕ ಯುಗದಲ್ಲಿಯೂ ಕಳೆದುಹೋಗಿಲ್ಲ ಎನ್ನುವುದನ್ನು ಅಂಬೇಡ್ಕರ್ ಕೊಲಾಜ್ ನಾಟಕ ಸಾಬೀತುಪಡಿಸುತ್ತದೆ ಎಂದು ಅಭಿನಂದಿಸಿದರು.
ಸಮಾಜ ಸೇವಕ ಸಿ.ಎಂ.ಆರ್ ಶ್ರೀನಾಥ್ ಮಾತನಾಡಿ ಅಂಬೇಡ್ಕರ್ರ ವ್ಯಕ್ತಿತ್ವ ಸಾಧನೆ, ಮಹಿಳಾ ಸಬಲೀಕರಣ ಹಾಗೂ ಸಮಾನತೆಗಾಗಿ ಅವರು ಶ್ರಮಿಸಿದ್ದ ಅಂಶಗಳನ್ನು ನಾಟಕ ಅರ್ಥಪೂರ್ಣವಾಗಿ ನಿರೂಪಿಸುತ್ತದೆ, ನೋಡುಗರನ್ನು ವಿಮರ್ಶೆಗೊಳಪಡಿಸಿ ಚಿಂತನೆಗೆ ದೂಡುವಂತೆ ಪ್ರೇರೇಪಿಸುತ್ತದೆ, ಅಂಬೇಡ್ಕರ್ ಕೊಲಾಜ್ ನಾಟಕವು ದೇಶದ ಎಲ್ಲಾ ಪ್ರಜ್ಞಾವಂತ ಮನಸುಗಳಿಗೆ ತಲುಪಬೇಕಿದೆ, ಈ ಮೂಲಕ ಕೆ.ರಾಮಯ್ಯರ ಬುಡ್ಡಿದೀಪ ಸಂಸ್ಥೆಯು ಸಮಾಜ ಹಾಗೂ ಸಮುದಾಯಗಳನ್ನು ಬೆಳಗಬೇಕಿದೆ ಎಂದು ಆಶಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್