
ವಿಜಯಪುರ, 28 ಮಾರ್ಚ್ (ಹಿ.ಸ.)
ಆ್ಯಂಕರ್ : ಸಮಾನತೆ, ಶಾಂತಿ ಮತ್ತು ಸಹಬಾಳ್ವೆಯ ಸಂದೇಶಗಳನ್ನು ಪಸರಿಸುವ ಮೂಲಕ ಸಮಾಜವನ್ನು ಸುಸ್ಥಿರತೆಯತ್ತ ಕೊಂಡೊಯ್ಯಲು ಮಹನೀಯರ ಜಯಂತಿ ಆಚರಣೆಗಳು ಸಹಕಾರಿಯಾಗುತ್ತವೆ ಎಂದು ಸಾಹಿತಿ-ಶಿಕ್ಷಕ ಸಂತೋಷ ಬಂಡೆ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ
ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡ ಶ್ರೀ ಅಗ್ನಿ ಬನ್ನಿರಾಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಗ್ನಿ ಬನ್ನಿರಾಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಕಾರ್ಯಕ್ರಮ ನಡೆಯಿತು. ಅಗ್ನಿ ಬನ್ನಿರಾಯರು ತಿಗಳ ಸಮುದಾಯದ ಶ್ರಮ ಸಂಸ್ಕೃತಿಯ ಪ್ರತೀಕವಾಗಿದ್ದು, ಭಾರತೀಯ ಪರಂಪರೆಗೆ ಮಹತ್ವದ ಕೊಡುಗೆ ನೀಡಿದ ದಾರ್ಶನಿಕರಾಗಿದ್ದಾರೆ. ಅವರ ಬದುಕು ಮತ್ತು ಬೋಧನೆಗಳನ್ನು ಸ್ಮರಿಸುವ ಮೂಲಕ ಸಮಾಜದಲ್ಲಿ ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಪುನರ್ ಸ್ಥಾಪಿಸಬಹುದು ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಕೆ.ಐ. ಮಕಾನದಾರ ಮಾತನಾಡಿ, ಮಹನೀಯರ ಆದರ್ಶ, ತತ್ವ ಮತ್ತು ವಿಚಾರಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಿ ಅವರ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಬೇಕು. ಜಯಂತಿಗಳು ಮಾನವನ ಜೀವನಕ್ಕೆ ಬೆಳಕಾಗಬೇಕು. ಮಹಾತ್ಮರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಜೀವನಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ಶಿಕ್ಷಕರಾದ ಎಸ್.ಎಸ್. ಅರಬ, ಎನ್.ಬಿ. ಚೌಧರಿ, ಎಸ್.ಪಿ. ಪೂಜಾರಿ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande