
ವಿಜಯಪುರ, 26 ಮಾರ್ಚ್ (ಹಿ.ಸ.)
ಆ್ಯಂಕರ್ : ಬಿಸಿಲಿನ ನಾಡಾದ ವಿಜಯಪುರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಉಷ್ಣತೆಗೆ ವಾಹನ ಸವಾರರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಟ್ರಾಫಿಕ್ ಸಿಗ್ನಲ್ಗಳಲ್ಲಿ ನೆರಳಿನ ಟೆಂಟ್ ವ್ಯವಸ್ಥೆ ಮಾಡಿದೆ.
ನಗರದ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಬಳಿ ವಾಹನ ಸವಾರರು ಬಿಸಿಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದ ಸವಾರರಿಗೆ ಸ್ವಲ್ಪ ಮಟ್ಟಿಗೆ ಪರಿಹಾರ ಕಲ್ಪಿಸಲು ಮಹಾನಗರ ಪಾಲಿಕೆ ನೆರಳಿನ ಟೆಂಟ್ಗಳನ್ನು ಅಳವಡಿಸಿದೆ.
ಸುಡುವ ಬಿಸಿಲಿನ ನಡುವೆ ಸಿಗ್ನಲ್ ಬಳಿ ನಿಲ್ಲುವ ವಾಹನ ಸವಾರರಿಗೆ ಈ ಟೆಂಟ್ಗಳು ನೆರಳಿನ ಆಸರೆಯಾಗಿವೆ. ನಗರದ ಬಸ್ ನಿಲ್ದಾಣದ ಸಮೀಪದ ಟ್ರಾಫಿಕ್ ಸಿಗ್ನಲ್ನಲ್ಲಿ 2 ಟೆಂಟ್, ಬಸವೇಶ್ವರ ವೃತ್ತದಲ್ಲಿ 3 ಟೆಂಟ್, ಗಾಂಧಿ ಚೌಕ್ ವೃತ್ತದಲ್ಲಿ 2 ಟೆಂಟ್, ಸೊಲ್ಲಾಪುರ ರಸ್ತೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಂಪರ್ಕಿಸುವ ವೃತ್ತದಲ್ಲಿ 2 ಟೆಂಟ್ ಸೇರಿದಂತೆ ಕೋರ್ಟ್ ಸರ್ಕಲ್ ಹಾಗೂ ವಜ್ರ ಹನುಮಾನ ನಗರ ಭಾಗಗಳಲ್ಲಿ ಒಟ್ಟು 6 ಪ್ರಮುಖ ಸ್ಥಳಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.
ಪಾಲಿಕೆ ಸದಸ್ಯ ರಾಹುಲ್ ಜಾಧವ್ ಅವರು ಮಾತನಾಡಿ, ಕಳೆದ ಕೆಲ ದಿನಗಳಿಂದ ಉಷ್ಣತೆ ಹೆಚ್ಚಿದ ಕಾರಣ ವಾಹನ ಸವಾರರು ಟ್ರಾಫಿಕ್ ಸಿಗ್ನಲ್ಗಳನ್ನು ಸರಿಯಾಗಿ ಪಾಲಿಸಲು ಕಷ್ಟವಾಗುತ್ತಿತ್ತು. ಪೊಲೀಸರೂ ಸಹ ಬಿಸಿಲಿನ ತೀವ್ರತೆಯಿಂದಾಗಿ ವಾಹನ ಸವಾರರನ್ನು ಕಟ್ಟುನಿಟ್ಟಾಗಿ ಪ್ರಶ್ನಿಸುವ ಪರಿಸ್ಥಿತಿ ಇರಲಿಲ್ಲ. ಇದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿತ್ತು. ಇದೀಗ ನೆರಳಿನ ಟೆಂಟ್ ವ್ಯವಸ್ಥೆ ಮಾಡಿದ ನಂತರ ವಾಹನ ಸವಾರರು ಸಿಗ್ನಲ್ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎಂದು ಹೇಳಿದರು.
ಸುಮಾರು ₹12 ಲಕ್ಷ ವೆಚ್ಚದ ಟೆಂಡರ್ ಮೂಲಕ ಈ ಟೆಂಟ್ಗಳನ್ನು ಅಳವಡಿಸಲಾಗಿದ್ದು, ಮಳೆಗಾಲ ಆರಂಭವಾದ ನಂತರ ಅವುಗಳನ್ನು ತೆರವುಗೊಳಿಸಲಾಗುತ್ತದೆ. ಇನ್ನೂ ಕೆಲವು ಪ್ರಮುಖ ವೃತ್ತಗಳಲ್ಲಿ ಟೆಂಟ್ ಅಳವಡಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಜೊತೆಗೆ ಪ್ರತಿ ವರ್ಷ ಟೆಂಡರ್ ಕರೆಯುವ ಬದಲು ಪಾಲಿಕೆಯೇ ಶಾಶ್ವತವಾಗಿ ಟೆಂಟ್ ಖರೀದಿ ಮಾಡಬೇಕು ಎಂಬ ಬೇಡಿಕೆಯೂ ಕೇಳಿಬರುತ್ತಿದೆ.
ಸ್ಥಳೀಯ ನಿವಾಸಿ ಲಕ್ಷ್ಮಣ ಹಂದ್ರಾಳ್ ಅವರು ಮಾತನಾಡಿ, ವಿಜಯಪುರದಲ್ಲಿ ದಿನೇ ದಿನೇ ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆ ಪಾಲಿಕೆಯ ಈ ಕ್ರಮ ವಾಹನ ಸವಾರರಿಗೆ ಸಹಾಯಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande