
ಬಾಗಲಕೋಟೆ, 26 ಮಾರ್ಚ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ರಾಜಕೀಯ ಕಣ ಈಗ ಕೇವಲ ಮತಗಳ ಹೋರಾಟವಾಗಿಲ್ಲ. ಅದು ಪಕ್ಷಗಳ ಪ್ರತಿಷ್ಠೆ ಹಾಗೂ ನಾಯಕತ್ವದ ಅಸ್ತಿತ್ವದ ಹೋರಾಟವಾಗಿ ರೂಪಾಂತರಗೊಂಡಿದೆ.
ಈ ನಡುವೆ ಬಿಜೆಪಿಯೊಳಗಿನ ಒಳಜಗಳ ಮತ್ತು ನಾಯಕರ ಮೌನದ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ನಾಮಪತ್ರ ಸಲ್ಲಿಕೆಯ ವೇಳೆ ಅನೇಕ ಘಟಾನುಘಟಿ ನಾಯಕರು ಹಾಜರಾಗಿ ಶಕ್ತಿಪ್ರದರ್ಶನ ನಡೆಸಿದ್ದರು.
ಆದರೆ ನಂತರದ ದಿನಗಳಲ್ಲಿ ಕೆಲವು ಪ್ರಮುಖ ನಾಯಕರು ಪ್ರಚಾರದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳದೇ ಇರುವುದು ಪಕ್ಷದ ಒಳ ರಾಜಕೀಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಎಂದು ಪಕ್ಷದ ಕಾರ್ಯಕರ್ತರು ಹಿಂದುಸ್ತಾನ್ ಸಮಾಚಾರ ಸುದ್ದಿ ಸಂಸ್ಥೆ ಎದುರು ಹೇಳಿಕೊಂಡಿದ್ದಾರೆ.
ಕ್ಷೇತ್ರದ ಪ್ರಭಾವಿ ನಾಯಕರು ಎನ್ನಲಾದ ಪಿ.ಎಚ್. ಪೂಜಾರ್ ಮತ್ತು ಮುರಗೇಶ್ ನಿರಾಣಿ ಅವರ ಮೌನ ಕೇಸರಿ ಪಾಳಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇವರ ಬೆಂಬಲ ಸಂಪೂರ್ಣವಾಗಿ ಲಭಿಸುತ್ತಿದೆಯೇ ಎಂಬ ಪ್ರಶ್ನೆಗಳನ್ನು ರಾಜಕೀಯ ವಲಯದಲ್ಲಿ ಕೆಲವರು ಎತ್ತುತ್ತಿದ್ದಾರೆ. ಜೊತೆಗೆ ಚರಂತಿಮಠ ಅವರ ರಾಜಕೀಯ ಶೈಲಿ ಹಾಗೂ ವರ್ತನೆ ಕುರಿತೂ ಕೆಲವು ಅಸಮಾಧಾನಗಳು ಪಕ್ಷದೊಳಗೆ ಇದ್ದವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪ್ರಚಾರದಲ್ಲಿ ಭಾಗವಹಿಸುತ್ತಿರುವ ಕೆಲವರು ಮನಸ್ಸಿನಿಂದಲ್ಲ, ಕೇವಲ ಪಕ್ಷ ಶಿಸ್ತಿನ ಕಾರಣದಿಂದ ಮಾತ್ರ ಭಾಗಿಯಾಗುತ್ತಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಆದರೆ ಈ ಎಲ್ಲ ಚರ್ಚೆಗಳ ನಡುವೆಯೂ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಪಕ್ಷದ ಗೆಲುವಿಗಾಗಿ ಶ್ರಮಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಪ್ರಚಾರ ಇನ್ನಷ್ಟು ಚುರುಕುಗೊಳ್ಳುವ ನಿರೀಕ್ಷೆಯಿದ್ದು, ಮತದಾರರ ತೀರ್ಪೇ ಅಂತಿಮ ಫಲಿತಾಂಶವನ್ನು ನಿರ್ಧರಿಸಲಿದೆ ಎಂಬುದು ಸ್ಥಳೀಯ ರಾಜಕೀಯ ವಿಶ್ಲೇಷಕ ಸಿದ್ದರಾಮಪ್ಪ ಬೀಳಗಿ ಅವರ ಅಭಿಪ್ರಾಯವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande