
ನವದೆಹಲಿ, 25 ಮಾರ್ಚ್ (ಹಿ.ಸ.):
ಆ್ಯಂಕರ್:
ಮೊಹಮ್ಮದ್ ಸಲಾಹ್ ಪ್ರಸಕ್ತ ಋತುವಿನ ಕೊನೆಯಲ್ಲಿ ಲಿವರ್‌ಪೂಲ್ ಪುಟ್ಬಾಲ್ ಕ್ಲಬ್ ತೊರೆಯಲಿರುವುದಾಗಿ ಮಂಗಳವಾರ ಭಾವನಾತ್ಮಕವಾಗಿ ಘೋಷಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊ ಸಂದೇಶದ ಮೂಲಕ ತಮ್ಮ ನಿರ್ಧಾರವನ್ನು ಅವರು ಅಧಿಕೃತವಾಗಿ ಪ್ರಕಟಿಸಿದರು.
“ದುರದೃಷ್ಟವಶಾತ್ ಈ ದಿನ ಬಂದಿದೆ. ಇದು ನನ್ನ ನಿರ್ಗಮನದ ಆರಂಭ. ಈ ಋತುವಿನ ಕೊನೆಯಲ್ಲಿ ನಾನು ಲಿವರ್‌ಪೂಲ್ ತೊರೆಯುತ್ತೇನೆ,” ಎಂದು 33 ವರ್ಷದ ಸಲಾಹ್ ಹೇಳಿದರು.
2017ರಲ್ಲಿ ಲಿವರ್‌ಪೂಲ್ ಸೇರಿಕೊಂಡ ಬಳಿಕ, ಸಲಾಹ್ ಕ್ಲಬ್‌ಗೆ ಅನೇಕ ಸ್ಮರಣೀಯ ಕ್ಷಣಗಳನ್ನು ಕೊಟ್ಟಿದ್ದಾರೆ. 435 ಪಂದ್ಯಗಳಲ್ಲಿ 255 ಗೋಲುಗಳನ್ನು ಗಳಿಸಿರುವ ಅವರು, ಕ್ಲಬ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲುಗಳಿಸಿದ ಮೂರನೇ ಆಟಗಾರರಾಗಿದ್ದಾರೆ.
ಸಲಾಹ್ ನೇತೃತ್ವದಲ್ಲಿ ಲಿವರ್‌ಪೂಲ್ 2019-20 ಋತುವಿನಲ್ಲಿ 30 ವರ್ಷಗಳ ನಂತರ ಪ್ರೀಮಿಯರ್ ಲೀಗ್ ಕಿರೀಟವನ್ನು ಜಯಿಸಿತು. ಇದಲ್ಲದೆ, ಚಾಂಪಿಯನ್ಸ್ ಲೀಗ್, ಎಫ್ಎ ಕಪ್, ಸೂಪರ್ ಕಪ್, ಕ್ಲಬ್ ವಿಶ್ವಕಪ್ ಹಾಗೂ ಲೀಗ್ ಕಪ್ ಸೇರಿದಂತೆ ಹಲವು ಪ್ರಮುಖ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ.
ತಮ್ಮ ಸಂದೇಶದಲ್ಲಿ ಕ್ಲಬ್, ನಗರ ಮತ್ತು ಅಭಿಮಾನಿಗಳೊಂದಿಗೆ ಬೆಳೆದ ಆತ್ಮೀಯತೆಯನ್ನು ಸ್ಮರಿಸಿದ ಸಲಾಹ್, “ಈ ಕ್ಲಬ್ ನನ್ನ ಜೀವನದ ಪ್ರಮುಖ ಭಾಗವಾಗಿದೆ. ಲಿವರ್‌ಪೂಲ್ ಸದಾ ನನ್ನ ಹೃದಯದಲ್ಲಿರುತ್ತದೆ,” ಎಂದು ಹೇಳಿದರು.
ತಮ್ಮ ಸಹ ಆಟಗಾರರು ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು, “ನನ್ನ ವೃತ್ತಿಜೀವನದ ಅತ್ಯುತ್ತಮ ಹಾಗೂ ಕಠಿಣ ಕ್ಷಣಗಳಲ್ಲಿ ನೀವು ನೀಡಿದ ಬೆಂಬಲವನ್ನು ಎಂದಿಗೂ ಮರೆಯುವುದಿಲ್ಲ,” ಎಂದು ಭಾವುಕರಾದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa