
ಟೆಹ್ರಾನ್, 25 ಮಾರ್ಚ್ (ಹಿ.ಸ.):
ಆ್ಯಂಕರ್:
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಮತ್ತಷ್ಟು ಭೀಕರ ರೂಪ ಪಡೆದುಕೊಂಡಿದ್ದು, ಇರಾನ್, ಇಸ್ರೇಲ್ ಹಾಗೂ ಲೆಬನಾನ್ ರಾಷ್ಟ್ರಗಳಲ್ಲಿ ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಫೆಬ್ರವರಿ 28ರಂದು ಆರಂಭವಾದ ಸಂಘರ್ಷ ಈಗ ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿ ಜಾಗತಿಕ ಆತಂಕಕ್ಕೆ ಕಾರಣವಾಗಿದೆ.
ಇರಾನ್ ರಾಜಧಾನಿ ಟೆಹ್ರಾನ್ ಪೂರ್ವ ಭಾಗದಲ್ಲಿ ಮುಂಜಾನೆ ಭಾರೀ ಸ್ಫೋಟಗಳು ಸಂಭವಿಸಿದ್ದು, ಬಾಂಬ್ ದಾಳಿಯಲ್ಲಿ ವಸತಿ ಕಟ್ಟಡಗಳ ಜೊತೆಗೆ ಒಂದು ಶಾಲೆ ಸಂಪೂರ್ಣವಾಗಿ ಧ್ವಂಸವಾಗಿದೆ. ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಇನ್ನೊಂದೆಡೆ, ಇಸ್ರೇಲ್ ರಾಜಧಾನಿ ಟೆಲ್ ಅವಿವ್ ಹಾಗೂ ಮಧ್ಯಭಾಗದಲ್ಲಿ ಇರಾನ್ ಮೂಲದ ಕ್ಷಿಪಣಿ ದಾಳಿಯ ಎಚ್ಚರಿಕೆ ಹಿನ್ನೆಲೆಯಲ್ಲಿ ವಾಯುದಾಳಿಯ ಸೈರನ್‌ಗಳು ಮೊಳಗಿದವು. ದಾಳಿಯಲ್ಲಿ ಕನಿಷ್ಠ ಒಬ್ಬರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ಲೆಬನಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಜ್ಬೊಲ್ಲಾ ಸಂಘಟನೆಯ ಗುರಿಗಳ ಮೇಲೆ ಇಸ್ರೇಲಿ ಸೇನೆ ಪ್ರತಿದಾಳಿ ನಡೆಸಿದೆ. ಪ್ರತಿಯಾಗಿ ಹೆಜ್ಬೊಲ್ಲಾ ಹಾಗೂ ಇರಾನ್ ಬೆಂಬಲಿತ ಗುಂಪುಗಳು ಉತ್ತರ ಇಸ್ರೇಲ್ ಭಾಗಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಮುಂದುವರಿಸುತ್ತಿವೆ.
ಇದಲ್ಲದೆ, ಇರಾಕ್‌ನಲ್ಲಿರುವ ಇಸ್ಲಾಮಿಕ್ ರೆಸಿಸ್ಟೆನ್ಸ್ ಗುಂಪು ಕಳೆದ 24 ಗಂಟೆಗಳಲ್ಲಿ ಅಮೆರಿಕದ ಗುರಿಗಳ ಮೇಲೆ ಅನೇಕ ದಾಳಿಗಳನ್ನು ನಡೆಸಿದೆ ಎಂದು ವರದಿಗಳು ತಿಳಿಸಿವೆ.
ಪ್ರಾದೇಶಿಕ ಮಟ್ಟದಲ್ಲಿ ಪರಿಸ್ಥಿತಿ ಮತ್ತಷ್ಟು ಕಠಿಣವಾಗಿದ್ದು, ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ ಸಂಭವಿಸಿ ಇಂಧನ ಟ್ಯಾಂಕ್ ಬೆಂಕಿಗೆ ಆಹುತಿಯಾಗಿದೆ. ಅಮ್ಮನ್ ನಗರ ದಕ್ಷಿಣ ಭಾಗದಲ್ಲಿ ಕ್ಷಿಪಣಿ ಅವಶೇಷಗಳು ಬಿದ್ದಿದ್ದು, ಸೌದಿ ಅರೇಬಿಯಾ ತನ್ನ ವಾಯು ರಕ್ಷಣಾ ವ್ಯವಸ್ಥೆಯ ಮೂಲಕ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸಿದೆ.
ಈ ಹಿನ್ನೆಲೆಯಲ್ಲಿ, ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ 82ನೇ ವಾಯುಗಾಮಿ ಪಡೆ (ಪ್ಯಾರಾಟ್ರೂಪರ್‌ಗಳು)ಗಳನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಲು ತೀರ್ಮಾನಿಸಿದೆ. ಈ ನಿರ್ಧಾರವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಕೈಗೊಳ್ಳಲಾಗಿದೆ.
ಹಾರ್ಮುಜ್ ಜಲಸಂಧಿ ಪ್ರದೇಶದ ಭದ್ರತೆ ಕುರಿತಾಗಿ ಅಮೆರಿಕ ಗಂಭೀರ ಕಳವಳ ವ್ಯಕ್ತಪಡಿಸಿದ್ದು, ಜಾಗತಿಕ ತೈಲ ಸರಬರಾಜಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಒಟ್ಟಾರೆ, ಮಧ್ಯಪ್ರಾಚ್ಯದ ಈ ಸಂಘರ್ಷವು ಈಗ ಬಹುಮುಖ ಯುದ್ಧದ ಸ್ವರೂಪ ಪಡೆದುಕೊಂಡಿದ್ದು, ಜಾಗತಿಕ ಭದ್ರತೆ ಹಾಗೂ ಆರ್ಥಿಕ ಸ್ಥಿತಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa