
ಟೆಹ್ರಾನ್, 23 ಮಾರ್ಚ್ (ಹಿ.ಸ.):
ಆ್ಯಂಕರ್:ಪಶ್ಚಿಮ ಏಷ್ಯಾದಲ್ಲಿ ಯುದ್ಧ ಉದ್ವಿಗ್ನತೆ ತಾರಕಕ್ಕೇರಿದಂತೆಯೇ ಟೆಹ್ರಾನ್ ನಲ್ಲಿ ಭೀಕರ ಸ್ಫೋಟಗಳು ಸಂಭವಿಸಿದರೆ, ಇಸ್ರೇಲ್ ಮೇಲೆ ಕ್ಷಿಪಣಿಗಳ ದಾಳಿ ನಡೆದಿದೆ. ಇದೇ ವೇಳೆ ಲೆಬನಾನ್ ದಕ್ಷಿಣ ಭಾಗದಲ್ಲಿರುವ ಕಾಸ್ಮಿಯೆಹ್ ಸೇತುವೆಯನ್ನು ಧ್ವಂಸಗೊಳಿಸಲಾಗಿದೆ.
ಇರಾನ್, ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸಂಘರ್ಷ ಫೆಬ್ರವರಿ 28ರಿಂದ ತೀವ್ರಗೊಂಡಿದ್ದು, ಯುದ್ಧ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ಹಿನ್ನೆಲೆ ಜಾಗತಿಕವಾಗಿ ತೈಲ ಹಾಗೂ ಅನಿಲ ಸಂಕಷ್ಟ ಮತ್ತಷ್ಟು ಗಂಭೀರವಾಗಿದೆ.
ವರದಿಗಳ ಪ್ರಕಾರ, ತೆಹ್ರಾನ್‌ನ ಪೂರ್ವ ಭಾಗದಲ್ಲಿ ಇದುವರೆಗೆ ಕಂಡ ಅತ್ಯಂತ ಭೀಕರ ದಾಳಿ ನಡೆದಿದ್ದು, ನಗರದೆಲ್ಲೆಡೆ ಕಂಪನ ಉಂಟಾಗಿದೆ. ದಾಳಿಯ ತೀವ್ರತೆಯನ್ನು ಗಮನಿಸಿ ಏರ್ ಡಿಫೆನ್ಸ್ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ. ಅಮೆರಿಕಾ-ಇಸ್ರೇಲ್ ಸಂಯುಕ್ತ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಮಧ್ಯೆ, ಐಡಿಎಫ್ ದಾಳಿ ಆರಂಭಕ್ಕೂ ಮುನ್ನವೇ ಇರಾನ್ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು. ಖೋರಮಾಬಾದ್ ನಲ್ಲಿ ನಡೆದ ವಾಯು ದಾಳಿಯಿಂದ ಭಾರಿ ಹಾನಿ ಸಂಭವಿಸಿದ್ದು, ಕ್ಷಿಪಣಿ ಮತ್ತು ರಾಕೆಟ್ ದಾಳಿಗಳ ಪರಿಣಾಮ ಕೆಲ ಪ್ರದೇಶಗಳಲ್ಲಿ ಬ್ಲ್ಯಾಕ್‌ಔಟ್ ಉಂಟಾಗಿದೆ. ಹಲವು ಕಟ್ಟಡಗಳು ಅವಶೇಷಗಳಾಗಿವೆ.
ಇದೇ ವೇಳೆ, ಇಸ್ರೇಲ್ ದಕ್ಷಿಣ ಲೆಬನಾನ್‌ನ ಪ್ರಮುಖ ಕಾಸ್ಮಿಯೆಹ್ ಸೇತುವೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು, ಸೇತುವೆ ಸಂಪೂರ್ಣ ಧ್ವಂಸಗೊಂಡಿದೆ. ಇದರಿಂದ ಸಾರಿಗೆ ಮತ್ತು ಮಾನವೀಯ ನೆರವು ಕಾರ್ಯಗಳು ಅಸ್ತವ್ಯಸ್ತಗೊಂಡಿವೆ.
ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಈ ದಾಳಿಯನ್ನು ಖಂಡಿಸಿದ್ದಾರೆ. ಇಸ್ರೇಲ್ ಪರವಾಗಿ, ಹಿಜ್ಬುಲ್ಲಾ ಉಗ್ರರು ಈ ಸೇತುವೆಯನ್ನು ಬಳಸುತ್ತಿದ್ದರು ಎಂಬ ಕಾರಣದಿಂದ ಇದನ್ನು ನಾಶಪಡಿಸುವುದು ಅಗತ್ಯವಾಯಿತು ಎಂದು ಹೇಳಲಾಗಿದೆ.
ಇದಕ್ಕೆ ಪ್ರತಿಯಾಗಿ ಇರಾನ್ ಕ್ಲಸ್ಟರ್ ಕ್ಷಿಪಣಿಗಳ ಮೂಲಕ ಮಧ್ಯ ಇಸ್ರೇಲ್ ಮೇಲೆ ದಾಳಿ ನಡೆಸಿದರೂ, ಗಾಯಾಳುಗಳ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಐಡಿಎಫ್ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa