
ನವದೆಹಲಿ, 23 ಮಾರ್ಚ್ (ಹಿ.ಸ.):
ಆ್ಯಂಕರ್:
ಪಶ್ಚಿಮ ಏಷ್ಯಾ ಸಂಘರ್ಷದ ವೇಳೆ ದೇಶದ ಮೇಲಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಸತತ ನಿಗಾ ವಹಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾತ್ರಿ ಹಿರಿಯ ಸಚಿವರು ಮತ್ತು ಅಧಿಕಾರಿಗಳ ತುರ್ತು ಸಭೆ ನಡೆಸಿ ಮಹತ್ವದ ಚರ್ಚೆ ನಡೆಸಿದ್ದು, ಅಗತ್ಯ ವಸ್ತುಗಳ ಪೂರೈಕೆ, ಭದ್ರತೆ ಸಂಬಂಧ ಅಗತ್ಯ ಸಲಹೆ ಸೂಚನೆ ನೀಡಿದ್ದಾರೆ.
ದೇಶದಲ್ಲಿ ಸದ್ಯದ ಪರಿಸ್ಥಿತಿ ಅವಲೋಕಿಸಿದ ಪ್ರಧಾನಿ, ಭವಿಷ್ಯದಲ್ಲಿ ಭಾರತದ ಮೇಲಾಗುವ ಪರಿಣಾಮ ಹಾಗೂ ಸರ್ಕಾರ ಜನಹಿತಕ್ಕಾಗಿ ಕೈಗೊಳ್ಳಬಹುದಾದ ಪರಿಹಾರ, ಪರ್ಯಾಯ ಕ್ರಮಗಳ ಬಗ್ಗೆ ಗಹನ ಚರ್ಚೆ ನಡೆಸಿದರು. ಅಲ್ಲದೆ, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರನ್ನು ಒಳಗೊಂಡಂತೆ ಹಿರಿಯ ಸಚಿವರುಗಳ ತಂಡ ಸಹ ರಚಿಸಿದ್ದಾರೆ.
ಸಂಪುಟ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ, ಜಾಗತಿಕ ಪರಿಸ್ಥಿತಿ ಮತ್ತು ಕೇಂದ್ರ ಸರ್ಕಾರದ ಸಚಿವಾಲಯ, ಇಲಾಖೆಗಳು ಕೈಗೊಂಡಿರುವ ಕ್ರಮಗಳ ಕುರಿತು ಸಂಪುಟ ಕಾರ್ಯದರ್ಶಿಯಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಕೃಷಿ, ರಸಗೊಬ್ಬರ, ಆಹಾರ ಭದ್ರತೆ, ಪೆಟ್ರೋಲಿಯಂ, ವಿದ್ಯುತ್, ಎಂಎಸ್‌ಎಂಇಗಳು, ರಫ್ತುದಾರರು, ಸಾಗಣೆ, ವ್ಯಾಪಾರ, ಹಣಕಾಸು ವಲಯಗಳ ಮೇಲಿನ ನಿರೀಕ್ಷಿತ ಪರಿಣಾಮ ಮತ್ತು ಪರಿಹಾರ ಕ್ರಮಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.
ಪಶ್ಚಿಮ ಏಷ್ಯಾ ಸಂಘರ್ಷದಿಂದ ಜಾಗತಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಖಾರಿಫ್ ಋತುವಿನಲ್ಲಿ ರೈತರ ಮೇಲಾಗುವ ಪರಿಣಾಮ ಮತ್ತು ರಸಗೊಬ್ಬರ ಅಗತ್ಯತೆ, ಪೂರೈಕೆ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೇ, ರಸಗೊಬ್ಬರ ದಾಸ್ತಾನು, ಲಭ್ಯತೆ ಹಾಗೂ ಪರ್ಯಾಯ ಮೂಲಗಳ ಕುರಿತು ಪ್ರಧಾನಿ ಚರ್ಚಿಸಿದರು.
ಆಹಾರ ಭದ್ರತೆಗೆ ಜೋಶಿ ಜತೆ ಮಹತ್ತರ ಚರ್ಚೆ, ಪಿಎಂ ಸಂತಸ:
ದೇಶದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಆಹಾರ ಧಾನ್ಯ, ಪದಾರ್ಥಗಳ ಸಕಾಲಿಕ ಲಭ್ಯತೆ ಬಗ್ಗೆ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಮಹತ್ತರ ಚರ್ಚೆ ನಡೆಸಿದರು ಪ್ರಧಾನಿ ಮೋದಿ. ಭವಿಷ್ಯದಲ್ಲಿ ನಿರಂತರ ಆಹಾರ ಲಭ್ಯತೆ ಹಾಗೂ ಜನಸಾಮಾನ್ಯರ, ಗ್ರಾಹಕರ ಹಿತರಕ್ಷಣೆಗೆ ಬದ್ಧವಾಗಿ ತ್ವರಿತ ಕ್ರಮ ಕೈಗೊಂಡ ಸಚಿವ ಜೋಶಿ ಅವರ ಕಾರ್ಯ ವೈಖರಿಗೆ ಪ್ರಧಾನಿ ಸಂತಸ ವ್ಯಕ್ತಪಡಿಸಿದರು.
ವಿದ್ಯುತ್ ಕೊರತೆಯಾಗದು: ವಿದ್ಯುತ್ ಸ್ಥಾವರಗಳಲ್ಲಿ ಇರುವ ಕಲ್ಲಿದ್ದಲು ದಾಸ್ತಾನು ಹಾಗೂ ನವೀಕರಿಸಬಹುದಾದ ಇಂಧನ ಉತ್ಪಾದನೆ ಸಹ ಹೆಚ್ಚಳವಾಗಿದೆ. ಹಾಗಾಗಿ ದೇಶದಲ್ಲಿ ವಿದ್ಯುತ್ ಕೊರತೆಯಾಗುವುದಿಲ್ಲ ಎಂದ ಅಭಿಪ್ರಾಯಿಸಿದ ಪ್ರಧಾನಿ ಸೌರ ಕ್ರಾಂತಿ, ಪವನ ವಿದ್ಯುತ್, ಹಸಿರು ಇಂಧನದಲ್ಲಾದ ಗಮನಾರ್ಹ ಸಾಧನೆ ಭಾರತದ ವಿದ್ಯುತ್ ವಲಯವನ್ನು ಬಲಪಡಿಸಿದೆ ಎನ್ನುತ್ತ ಸಚಿವ ಜೋಶಿ ಅವರ ಕಾರ್ಯ ತತ್ಪರತೆಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಸಾಯನಿಕ, ಔಷಧ, ಪೆಟ್ರೋಕೆಮಿಕಲ್ ಮತ್ತು ಕೈಗಾರಿಕಾ ವಲಯಗಳಿಗೆ ಅಗತ್ಯವಿರುವ ಆಮದು ಮೂಲಗಳನ್ನು ವೈವಿಧ್ಯಗೊಳಿಸುವ ಬಗ್ಗೆ ಪ್ರಧಾನಿ ಸಲಹೆ ನೀಡಿದರು. ಅಂತೆಯೇ ಭಾರತೀಯ ಸರಕುಗಳನ್ನು ಉತ್ತೇಜಿಸಲು ಮುಂದಿನ ದಿನಗಳಲ್ಲಿ ಹೊಸ ರಫ್ತು ತಾಣಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಸಹ ಪ್ರಸ್ತಾಪಿಸಿ, ಸಮಾಲೋಚನೆ ನಡೆಸಿದರು.
ಸಚಿವ-ಕಾರ್ಯದರ್ಶಿ ತಂಡ ರಚನೆ: ಈ
ಜಾಗತಿಕ ಯುದ್ಧದ ಸನ್ನಿವೇಶದಲ್ಲಿ ದೇಶ ಭದ್ರತೆ, ರಕ್ಷಣೆ, ಆಹಾರ, ಅಗತ್ಯ ಸಾಮಗ್ರಿ ಪೂರೈಕೆ ವಿಚಾರವಾಗಿ ಸಮರ್ಪಕ, ಸಮರ್ಪಿತವಾಗಿ ಕೆಲಸ ಮಾಡಲು ಸಚಿವರು ಮತ್ತು ಕಾರ್ಯದರ್ಶಿಗಳ ತಂಡ ರಚನೆಗೆ ಪ್ರಧಾನಿ ನಿರ್ದೇಶನ ನೀಡಿದರು.
ಮಧ್ಯಪ್ರಾಚ್ಯ ಯುದ್ಧ ಸಂಘರ್ಷ ತೀವ್ರಗೊಳ್ಳುತ್ತಿದ್ದರಿಂದ ಇಂದು ಇಡೀ ಜಗತ್ತೇ ಒಂದಿಲ್ಲೊಂದು ರೂಪದಲ್ಲಿ ಕ್ಷಾಮ, ಪರಿಣಾಮ ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಪ್ರಧಾನಿ, ಕ್ಲಿಷ್ಟ ಪರಿಸ್ಥಿತಿಯಲ್ಲಿ ನಾಗರಿಕರ ರಕ್ಷಣೆಗೆ ಸರ್ವ ಪ್ರಯತ್ನ ನಡೆಸುವಂತೆ ಸಚಿವ ಸಂಪುಟ ಸಮಿತಿಗೆ ಪ್ರಧಾನಿ ನಿರ್ದೇಶನ ನೀಡಿದರು.
ಮಾರುಕಟ್ಟೆಗಳಲ್ಲಿ ಕೃತಕ ಅಭಾವ ಸೃಷ್ಟಿ ಮತ್ತು ಪ್ರಮುಖ ಸರಕುಗಳ ಸಂಗ್ರಹಣೆ ಮೇಲೆ ನಿಗಾ ವಹಿಸುವ ಜತೆಗೆ ಆಯಾ ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ಪ್ರಮುಖ ಸಚಿವರುಗಳು ಮತ್ತು ಇಲಾಖಾ ಕಾರ್ಯದರ್ಶಿಗಳಿಗೆ ಪ್ರಧಾನಿ ಸಲಹೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa