ಕೆರೆ ಹೂಳೆತ್ತಲು ರಾಜ್ಯ ಸರ್ಕಾರ ಪ್ರತ್ಯೇಕ ಹಣ ಮೀಸಲಿಡಬೇಕು: ಬೊಮ್ಮಾಯಿ
ಹಾವೇರಿ, 22 ಮಾರ್ಚ್ (ಹಿ.ಸ.): ಆ್ಯಂಕರ್: ರಾಜ್ಯದಲ್ಲಿ ರೈತರ ಹಿತಾಸಕ್ತಿಯನ್ನು ಕಾಪಾಡಬೇಕೆಂದರೆ ಕೆರೆಗಳ ಸಂರಕ್ಷಣೆ ಅತ್ಯಂತ ಮುಖ್ಯವಾಗಿದ್ದು, ಕೆರೆ ಹೂಳೆತ್ತಲು ರಾಜ್ಯ ಸರ್ಕಾರ ಪ್ರತ್ಯೇಕ ಅನುದಾನವನ್ನು ಮೀಸಲಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು. ಹಾವೇರ
ಬೊಮ್ಮಾಯಿ


ಹಾವೇರಿ, 22 ಮಾರ್ಚ್ (ಹಿ.ಸ.):

ಆ್ಯಂಕರ್:

ರಾಜ್ಯದಲ್ಲಿ ರೈತರ ಹಿತಾಸಕ್ತಿಯನ್ನು ಕಾಪಾಡಬೇಕೆಂದರೆ ಕೆರೆಗಳ ಸಂರಕ್ಷಣೆ ಅತ್ಯಂತ ಮುಖ್ಯವಾಗಿದ್ದು, ಕೆರೆ ಹೂಳೆತ್ತಲು ರಾಜ್ಯ ಸರ್ಕಾರ ಪ್ರತ್ಯೇಕ ಅನುದಾನವನ್ನು ಮೀಸಲಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಹಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿಗ್ಗಾವಿ ಮತ್ತು ಸವಣೂರು ತಾಲೂಕುಗಳಲ್ಲಿ ಸುಮಾರು 500 ಕೆರೆಗಳಿದ್ದು, ಅವುಗಳಲ್ಲಿ ಕನಿಷ್ಠ 100 ದೊಡ್ಡ ಕೆರೆಗಳಾಗಿವೆ ಎಂದು ಹೇಳಿದರು. ಈ ಕೆರೆಗಳ ಸಮರ್ಪಕ ನಿರ್ವಹಣೆ ಮತ್ತು ಹೂಳೆತ್ತುವ ಕಾರ್ಯ ನಡೆದರೆ ಪ್ರವಾಹ ಸಮಸ್ಯೆಯನ್ನು ತಡೆಗಟ್ಟಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.

ಹಿಂದಿನ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕೆರೆ ಹೂಳೆತ್ತಲು ₹200 ಕೋಟಿ ಅನುದಾನ ಮೀಸಲಿಟ್ಟಿದ್ದರು ಎಂದು ಸ್ಮರಿಸಿದ ಅವರು, ಅದೇ ಮಾದರಿಯಲ್ಲಿ ಇಂದಿನ ಸರ್ಕಾರವೂ ವಿಶೇಷ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

2015-17ರ ಬರಗಾಲದ ಸಂದರ್ಭದಲ್ಲಿ ವ್ಯಾಪಕವಾಗಿ ಕೆರೆ ಹೂಳೆತ್ತುವ ಕಾರ್ಯ ನಡೆದಿದ್ದು, ಭಾರತ್ ಸೇವಾ ಸಂಸ್ಥೆ ಮಹತ್ವದ ಪಾತ್ರವಹಿಸಿತು ಎಂದು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಹೂಳೆತ್ತುವ ಕಾರ್ಯ ಕಡಿಮೆಯಾಗಿದ್ದರೂ, ಈ ವರ್ಷ ಬೇಸಿಗೆಯಲ್ಲಿ ಕೆರೆಗಳು ಒಣಗಿರುವ ಹಿನ್ನೆಲೆಯಲ್ಲಿ ಮತ್ತೆ ಕಾರ್ಯಾರಂಭವಾಗಿದೆ ಎಂದು ತಿಳಿಸಿದರು.

ಪ್ರತಿ ಜಿಲ್ಲಾ ಪಂಚಾಯತಿಯಲ್ಲಿ ಕನಿಷ್ಠ ಒಂದು ಕೆರೆ ಹೂಳೆತ್ತುವ ನಿರ್ಧಾರ ಸ್ವಾಗತಾರ್ಹವಾಗಿದ್ದು, ಈ ಕಾರ್ಯದಲ್ಲಿ ತೊಡಗಿರುವವರ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಹೇಳಿದರು. ಸಮಾಜದಲ್ಲಿ “ನಮ್ಮ ಹೊಲ, ನಮ್ಮ ಮನೆ, ನಮ್ಮ ಕೆರೆ, ನಮ್ಮ ಊರು” ಎಂಬ ಮನೋಭಾವ ಬೆಳೆಸಿದರೆ ಗ್ರಾಮ ಸ್ವರಾಜ್ಯದಿಂದ ಸುರಾಜ್ಯ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾತ್ರದ ಬಗ್ಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ

ಯೋಜನೆಯಡಿ ಹಾವೇರಿ ಜಿಲ್ಲೆಗೆ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಪ್ರತಿ ತಾಲೂಕಿಗೆ ಕೆರೆ ಅಭಿವೃದ್ಧಿಗೆ ಅನುದಾನ ದೊರೆಯಲಿದೆ ಎಂದು ಹೇಳಿದರು. ಕೆರೆಗಳ ರಕ್ಷಣೆ ಮಾಡಿದರೆ ಭೂಮಿ ಮತ್ತು ನಿಸರ್ಗದ ಸಮತೋಲನ ಕಾಪಾಡಬಹುದು. ಕೆರೆಗಳು ಪ್ರಕೃತಿಯ “ಫ್ಲಡ್ ಕ್ಯಾರಿಯರ್ಸ್” ಆಗಿದ್ದು, ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ಪ್ರವಾಹ ಸಮಸ್ಯೆಯನ್ನು ತಡೆಗಟ್ಟಬಹುದು ಎಂದು ಹೇಳಿದರು.

ರೈತರ ಬದುಕು ಉಳಿಸಬೇಕಾದರೆ ಕೆರೆಗಳ ಉಳಿವು ಮತ್ತು ಅಭಿವೃದ್ಧಿಗೆ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande