
ಗದಗ, 22 ಮಾರ್ಚ್ (ಹಿ.ಸ.)
ಆ್ಯಂಕರ್:- ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಲಿಂಬಯ್ಯ ಸ್ವಾಮಿಮಠದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ವತಿಯಿಂದ ಐದು ವರ್ಷಗಳಿಗೊಮ್ಮೆ ನಡೆಯುವ ವಿಶೇಷ ನಂದಿಪಟ ಆರೋಹಣ ಕಾರ್ಯಕ್ರಮ ಭಕ್ತಿಭಾವದಿಂದ ಹಾಗೂ ಅದ್ಧೂರಿಯಾಗಿ ನೆರವೇರಿತು. ಈ ಅಪರೂಪದ ಧಾರ್ಮಿಕ ವಿಧಿವಿಧಾನವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಆಗಮಿಸಿ ಮಠದ ಆವರಣದಲ್ಲಿ ಭಕ್ತಿಯ ಸಾಗರ ಹರಿಯಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕರೇವಾಡಿಮಠದ ಶ್ರೀ ಮಳೆಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರು, ವೀರಶೈವ ಧರ್ಮದ ಮಹತ್ವವನ್ನು ವಿವರಿಸಿ ಮಾತನಾಡಿದರು. ಲಿಂಗದೀಕ್ಷೆ ಭಗವಂತನನ್ನು ಸಾಕ್ಷಾತ್ಕಾರಪಡಿಸಿಕೊಳ್ಳುವ ಚೈತನ್ಯಮಯ ಶಕ್ತಿ ಸಾಧನವಾಗಿದ್ದು, ಗುರುವರ್ಯರಿಂದ ಶಿವದೀಕ್ಷೆ ಪಡೆದು ಇಷ್ಟಲಿಂಗವನ್ನು ಪೂಜಿಸಿದರೆ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು.
ವೀರಶೈವ ಧರ್ಮದಲ್ಲಿ ಗುರು-ಲಿಂಗ-ಜಂಗಮಗಳಿಗೆ ಅತ್ಯುನ್ನತ ಸ್ಥಾನಮಾನವಿದ್ದು, ಲಿಂಗಧಾರಣೆ ಮತ್ತು ಶಿವಪೂಜೆ ಮಾನವನ ಆತ್ಮಬಲವನ್ನು ವೃದ್ಧಿಸುತ್ತದೆ. ಇದರಿಂದ ವ್ಯಕ್ತಿಗೆ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಹಕ್ಕು ಸಿಗುವುದರ ಜೊತೆಗೆ ಆಧ್ಯಾತ್ಮಿಕ ಬೆಳವಣಿಗೆಗೂ ದಾರಿ ತೆರೆದಿಡುತ್ತದೆ ಎಂದು ವಿವರಿಸಿದರು. ವಿಭೂತಿ, ಲಿಂಗ, ಜೋಳಿಗೆ ಹಾಗೂ ದಂಡ ಇವು ಸಂಸ್ಕಾರದ ಪ್ರತೀಕಗಳಾಗಿವೆ ಎಂದೂ ಅವರು ತಿಳಿಸಿದರು.
ಸಾವಿರಾರು ವರ್ಷಗಳ ಪುರಾತನ ಇತಿಹಾಸವನ್ನು ಹೊಂದಿರುವ ಲಿಂಬಯ್ಯಸ್ವಾಮಿಮಠವು ಹಿರಿಯರಿಂದ ಸಂಪ್ರದಾಯಬದ್ಧವಾಗಿ ಬಂದಿದ್ದು, ಅದನ್ನು ಇಂದಿನ ವಂಶಸ್ಥರು ಸಮರ್ಪಕವಾಗಿ ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತೋಷಕರ ಸಂಗತಿ ಎಂದು ಸ್ವಾಮೀಜಿ ಶ್ಲಾಘಿಸಿದರು. ಐದು ವರ್ಷಗಳಿಗೊಮ್ಮೆ ನಡೆಯುವ ಈ ಮಹತ್ವದ ಕಾರ್ಯಕ್ರಮ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಲಿಂಬಯ್ಯಸ್ವಾಮಿಮಠದ ವಂಶಸ್ಥ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ ಮಾತನಾಡಿ, ಮಠದ ಅಪೂರ್ವ ಐತಿಹ್ಯಗಳನ್ನು ವಿವರಿಸಿದರು. ನಂದಿಪಟ, ಶಿರಸ್ ಪವಾಡಗೈದ ಗಂಡುಗತ್ತರಿ, ವೀರಕಂಕಣ, ಬಲಮುರಿ ಶಂಖ, ಎರಮುರಿ ಬೆತ್ತ, ಏಕಗಳಲಿನ ಬೆತ್ತ, ಛಾಪಗೊಡಲಿ ಹಾಗೂ ಬ್ರಹ್ಮಕಪಾಲ ಸೇರಿದಂತೆ ಅನೇಕ ಪವಿತ್ರ ವಸ್ತುಗಳನ್ನು ಐದು ವರ್ಷಗಳಿಗೊಮ್ಮೆ ಮಾತ್ರ ಹೊರತೆಗೆದು ಪೂಜೆ ಸಲ್ಲಿಸಿ ಭಕ್ತರಿಗೆ ದರ್ಶನಕ್ಕೆ ಇಡಲಾಗುತ್ತದೆ ಎಂದು ತಿಳಿಸಿದರು.
ಶಿವಲಿಂಗ ಪೂಜೆ, ಜಂಗಮ ವಟುಗಳಿಗೆ ಅಯ್ಯಾಚಾರ, ಲಿಂಗದೀಕ್ಷೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಭಕ್ತರು ಭಕ್ತಿಭಾವದಿಂದ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ವೀರಭದ್ರಯ್ಯ ಹಿರೇಮಠ, ಸೋಮಯ್ಯ ಕಲ್ಮಠ, ಶಿವರಾಜ ಕರೇವಾಡಿಮಠ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಆನಂದಸ್ವಾಮಿ ಗಡ್ಡದೇವರಮಠ, ಚಿದಾನಂದ, ನಿರಂಜನ ಲಿಂಬಯ್ಯಸ್ವಾಮಿಮಠ, ಈರಣ್ಣ ಅಂಕಲಕೋಟಿ, ಶಾಂತರಾಜ ಓದುನವರ, ಮಹೇಶ, ವಿ.ಜಿ. ಪಡಗೇರಿ, ರಾಮಣ್ಣ ಪಡಗೇರಿ, ಎಸ್.ಜಿ. ಗುಳಗಣ್ಣವರ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP