
ಗದಗ, 22 ಮಾರ್ಚ್ (ಹಿ.ಸ.)
ಆ್ಯಂಕರ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ ಇರಾನ್, ಇಸ್ರೇಲ್ ಹಾಗೂ ಅಮೇರಿಕಾ ನಡುವಿನ ಯುದ್ಧ ಭೀತಿ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುತ್ತಿದ್ದು, ಅದರ ಬಿಸಿ ಈಗ ಗದಗ ಜಿಲ್ಲೆಗೂ ತಟ್ಟಿದಂತಾಗಿದೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಪೆಟ್ರೋಲ್ ಅಭಾವ ಉಂಟಾಗಿ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಗದಗ ನಗರದ ಚೆನ್ನಮ್ಮ ಸರ್ಕಲ್ ಸಮೀಪದಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ, ಪೆಟ್ರೋಲ್ ಸಂಪೂರ್ಣ ಖಾಲಿಯಾಗಿದ್ದು, “ನೋ ಸ್ಟಾಕ್” ಬೋರ್ಡ್ ಅಳವಡಿಸಲಾಗಿದೆ. ನಿನ್ನೆ ಮಧ್ಯಾಹ್ನ 4 ಗಂಟೆಯಿಂದಲೇ ಪೆಟ್ರೋಲ್ ಖಾಲಿಯಾಗಿದ್ದು, ಇಂಧನಕ್ಕಾಗಿ ಬಂಕ್ಗೆ ಆಗಮಿಸಿದ ಬೈಕ್ ಹಾಗೂ ಕಾರು ಸವಾರರು ನಿರಾಶೆಯಿಂದ ಹಿಂದಿರುಗುತ್ತಿದ್ದಾರೆ.
ಪೆಟ್ರೋಲ್ ಸರಬರಾಜಿಗಾಗಿ ಹೊರಟಿದ್ದ ಎರಡು ಟ್ಯಾಂಕರ್ಗಳು ಇನ್ನೂ ತಲುಪದೇ ಇರುವುದೇ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಟ್ಯಾಂಕರ್ಗಳು ಹುಬ್ಬಳ್ಳಿ ನಗರದಲ್ಲಿ ದೀರ್ಘ ಸಾಲಿನಲ್ಲಿ ನಿಂತಿರುವುದರಿಂದ ವಿಳಂಬವಾಗುತ್ತಿದೆ. ಇದರ ಪರಿಣಾಮವಾಗಿ ಗದಗ ನಗರದಲ್ಲಿ ಪೆಟ್ರೋಲ್ ಕೊರತೆ ಉಂಟಾಗಿದೆ.
ಇನ್ನೊಂದೆಡೆ, ಡೀಸೆಲ್ ಮಾತ್ರ ಲಭ್ಯವಿದ್ದು, ಪೆಟ್ರೋಲ್ ಮಾತ್ರ ಸಂಪೂರ್ಣ ಖಾಲಿಯಾಗಿರುವುದು ಗಮನಾರ್ಹ. ಬಂಕ್ ಸಿಬ್ಬಂದಿ “ಪೆಟ್ರೋಲ್ ಸ್ಟಾಕ್ ಇಲ್ಲ” ಎಂದು ಗ್ರಾಹಕರನ್ನು ಹಿಂತಿರುಗಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಹಲವು ವಾಹನ ಸವಾರರು ಒಂದೇ ದಿನದಲ್ಲಿ ಅನೇಕ ಪೆಟ್ರೋಲ್ ಬಂಕ್ಗಳನ್ನು ಸುತ್ತಿದರೂ ಇಂಧನ ಸಿಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ.
ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದು, “ಪೆಟ್ರೋಲ್ ಇಲ್ಲದೇ ದೈನಂದಿನ ಕೆಲಸಗಳು ಅಸ್ತವ್ಯಸ್ತವಾಗಿವೆ. ತುರ್ತು ಕಾರ್ಯಗಳಿಗೆ ತೆರಳಲು ಕೂಡ ಸಮಸ್ಯೆಯಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಜಾಗತಿಕ ಮಟ್ಟದ ಉದ್ವಿಗ್ನತೆ ಸ್ಥಳೀಯ ಮಟ್ಟದಲ್ಲಿಯೂ ಪರಿಣಾಮ ಬೀರುತ್ತಿರುವುದು ಸ್ಪಷ್ಟವಾಗಿದ್ದು, ಪೆಟ್ರೋಲ್ ಸರಬರಾಜು ಶೀಘ್ರದಲ್ಲೇ ಪುನರಾರಂಭವಾಗದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ಮತ್ತು ಇಂಧನ ಇಲಾಖೆ ತಕ್ಷಣ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP