
ಗದಗ, 22 ಮಾರ್ಚ್ (ಹಿ.ಸ.)
ಆ್ಯಂಕರ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ ಇರಾನ್, ಇಸ್ರೇಲ್ ಹಾಗೂ ಅಮೇರಿಕಾ ನಡುವಿನ ಯುದ್ಧ ಭೀತಿ ಜಾಗತಿಕ ಇಂಧನ ಸರಬರಾಜಿನ ಮೇಲೆ ಪರಿಣಾಮ ಬೀರಿದ್ದು, ಅದರ ಬಿಸಿ ಇದೀಗ ಗದಗ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೂ ತಟ್ಟಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಗದಗದ ಸರ್ಕಾರಿ ಸಂಯುಕ್ತ ಆಯುಷ್ಯ ಆಸ್ಪತ್ರೆಗೆ ಸಂಕಷ್ಟ ಎದುರಾಗಿದೆ.
ಗದಗ ನಗರದಲ್ಲಿನ ಸರ್ಕಾರಿ ಸಂಯುಕ್ತ ಆಯುಷ್ಯ ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯಲು ದಿನನಿತ್ಯ 10ರಿಂದ 20 ರೋಗಿಗಳು ದಾಖಲಾಗುತ್ತಿದ್ದು, ಅವರಿಗೆ ನೀಡುವ ಚಿಕಿತ್ಸೆಯಲ್ಲಿ ಗ್ಯಾಸ್ ಸಿಲಿಂಡರ್ ಅತ್ಯಗತ್ಯವಾಗಿದೆ. ವಿಶೇಷವಾಗಿ ಸ್ಟೀಮ್ ಆಧಾರಿತ ಚಿಕಿತ್ಸೆಗಳು, ಆಯುರ್ವೇದದ ಪಂಚಕರ್ಮ ಕ್ರಮಗಳು ಗ್ಯಾಸ್ ಸಿಲಿಂಡರ್ ಮೇಲೆ ಅವಲಂಬಿತವಾಗಿವೆ.
ಆದರೆ ಇತ್ತೀಚಿನ ದಿನಗಳಲ್ಲಿ 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಲಭ್ಯವಾಗದೇ ಇರುವುದರಿಂದ ಆಸ್ಪತ್ರೆ ನಿರ್ವಹಣೆಗೆ ದೊಡ್ಡ ಸವಾಲು ಎದುರಾಗಿದೆ. ಹಿಂದೆ ನಿಯಮಿತವಾಗಿ ಬಳಸಲಾಗುತ್ತಿದ್ದ 19 ಕೆಜಿ ಸಿಲಿಂಡರ್ಗಳ ಬದಲು ಈಗ 5 ಕೆಜಿ ಸಣ್ಣ ಸಿಲಿಂಡರ್ಗಳನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಸ್ತುತ ಆಸ್ಪತ್ರೆ ಸಿಬ್ಬಂದಿ ಐದು ಕೆಜಿ ಸಾಮರ್ಥ್ಯದ ಸುಮಾರು ಐದು ಸಿಲಿಂಡರ್ಗಳನ್ನು ಬಳಸಿಕೊಂಡು ದಿನನಿತ್ಯದ ಚಿಕಿತ್ಸಾ ಕಾರ್ಯಗಳನ್ನು ಸಾಗಿಸುತ್ತಿದ್ದಾರೆ. ಇದರಿಂದ ನಿರ್ವಹಣೆಯಲ್ಲಿ ಹೆಚ್ಚುವರಿ ಒತ್ತಡ ಉಂಟಾಗಿದ್ದು, ಚಿಕಿತ್ಸೆಯ ಪ್ರಕ್ರಿಯೆಯಲ್ಲಿಯೂ ವ್ಯತ್ಯಯ ಉಂಟಾಗುವ ಆತಂಕ ವ್ಯಕ್ತವಾಗಿದೆ. ಇನ್ನು, ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಊಟ ಹಾಗೂ ಉಪಹಾರ ಸಿದ್ಧಪಡಿಸುವುದಲ್ಲಿಯೂ ಸಮಸ್ಯೆ ಎದುರಾಗಿದೆ. ಸಿಲಿಂಡರ್ ಕೊರತೆಯಿಂದ ಅಡುಗೆ ಕಾರ್ಯಗಳಲ್ಲಿ ವ್ಯತ್ಯಯ ಉಂಟಾಗಿ, ಆಸ್ಪತ್ರೆಯ ಸಿಬ್ಬಂದಿ ಪರ್ಯಾಯ ವ್ಯವಸ್ಥೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿ ಬಂದಿದೆ.
ಸಮಸ್ಯೆಯನ್ನು ತಾತ್ಕಾಲಿಕವಾಗಿ ಎದುರಿಸಲು ಆಸ್ಪತ್ರೆ ಸಿಬ್ಬಂದಿ ಎಲೆಕ್ಟ್ರಾನಿಕ್ ಒಲೆಗಳ ಮೊರೆ ಹೋಗಿದ್ದು, ಸೀಮಿತ ಸೌಲಭ್ಯಗಳಲ್ಲೇ ಸೇವೆ ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿಯೂ ರೋಗಿಗಳಿಗೆ ತೊಂದರೆ ಆಗದಂತೆ ಚಿಕಿತ್ಸೆ ನೀಡಲು ವೈದ್ಯರು ಶ್ರಮಿಸುತ್ತಿದ್ದಾರೆ.
ಆಸ್ಪತ್ರೆಯ ವೈದ್ಯರು ಹೇಳುವಂತೆ, “ಸಿಲಿಂಡರ್ ಸಮಸ್ಯೆ ಇದ್ದರೂ ರೋಗಿಗಳ ಚಿಕಿತ್ಸೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನಾವು ಕ್ರಮ ಕೈಗೊಂಡಿದ್ದೇವೆ. ಪರ್ಯಾಯ ವ್ಯವಸ್ಥೆಗಳಿಂದ ಸೇವೆ ನಿರಂತರವಾಗಿ ಮುಂದುವರಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಕಮರ್ಷಿಯಲ್ ಸಿಲಿಂಡರ್ ಕೊರತೆಯಿಂದ ಹೋಟೆಲ್ ಕ್ಷೇತ್ರದ ಬಳಿಕ ಇದೀಗ ಆರೋಗ್ಯ ಕ್ಷೇತ್ರಕ್ಕೂ ಹೊಡೆತ ಬಿದ್ದಿದ್ದು, ರೋಗಿಗಳ ಸೇವೆಯಲ್ಲಿ ಅಡಚಣೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗಳು ತಕ್ಷಣ ಕ್ರಮ ಕೈಗೊಂಡು ಆಸ್ಪತ್ರೆಗಳಿಗೆ ಆದ್ಯತೆ ನೀಡಿ ಸಿಲಿಂಡರ್ ಸರಬರಾಜು ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP