ಗದಗನಲ್ಲಿ ಗ್ಯಾಸ್ ಏಜನ್ಸಿಗಳ ಸುಲಿಗೆ: ಹೊಟೆಲ್ ಮಾಲಿಕರ ಆಕ್ರೋಶ
ಗದಗ, 22 ಮಾರ್ಚ್ (ಹಿ.ಸ.) ಆ್ಯಂಕರ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಇರಾನ್, ಇಸ್ರೇಲ್ ಮತ್ತು ಅಮೇರಿಕಾ ನಡುವಿನ ಯುದ್ಧ ಭೀತಿ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುತ್ತಿರುವ ಸಂದರ್ಭದಲ್ಲಿ, ಅದರ ನೆಪವನ್ನೇ ಬಳಸಿಕೊಂಡು ಗದಗ ಜಿಲ್ಲೆಯ ಕೆಲ ಖಾಸಗಿ ಗ್ಯಾಸ್ ಏ
ಫೋಟೋ


ಗದಗ, 22 ಮಾರ್ಚ್ (ಹಿ.ಸ.)

ಆ್ಯಂಕರ್:

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಇರಾನ್, ಇಸ್ರೇಲ್ ಮತ್ತು ಅಮೇರಿಕಾ ನಡುವಿನ ಯುದ್ಧ ಭೀತಿ ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುತ್ತಿರುವ ಸಂದರ್ಭದಲ್ಲಿ, ಅದರ ನೆಪವನ್ನೇ ಬಳಸಿಕೊಂಡು ಗದಗ ಜಿಲ್ಲೆಯ ಕೆಲ ಖಾಸಗಿ ಗ್ಯಾಸ್ ಏಜನ್ಸಿಗಳು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.

ಗದಗ ಜಿಲ್ಲೆಯ ಹೋಟೆಲ್ ಮಾಲೀಕರು ಗಂಭೀರ ಆರೋಪ ಮಾಡಿದ್ದು, ವಾಣಿಜ್ಯ ಬಳಕೆಯ 19 ಕೆಜಿ ಅಗ್ನಿ ಸಿಲಿಂಡರ್ಗಳ ಬೆಲೆಯಲ್ಲಿ ಅಸಹಜ ಏರಿಕೆ ಕಂಡುಬಂದಿದೆ ಎಂದು ಹೇಳಿದ್ದಾರೆ. ಮೂಲ ಬೆಲೆ ಸುಮಾರು ₹1800 ಇರಬೇಕಾದ ಸಿಲಿಂಡರ್ಗಳನ್ನು ಮೊದಲಿಗೆ ₹2400ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಇದೀಗ ಅದೇ ಸಿಲಿಂಡರ್ಗಳನ್ನು ₹2800ಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಗದಗ ಕೇಂದ್ರ ಬಸ್ ನಿಲ್ದಾಣದ ಸಮೀಪದ ಹೋಟೆಲ್ ಮಾಲೀಕರಾದ ಯಲ್ಲಪ್ಪ ಅವರು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ನಾವು ಎಷ್ಟು ಹಣವಾದರೂ ಕೊಡಲು ಸಿದ್ಧ. ಆದರೆ ಸರಿಯಾದ ಬಿಲ್ ನೀಡಬೇಕು. ಬಿಲ್ ಕೇಳಿದರೆ ಸಿಲಿಂಡರ್ ಕೊಡಲ್ಲ ಅಂತ ಏಜನ್ಸಿಯವರು ಹೇಳುತ್ತಾರೆ,” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಹೆಚ್ಚಿದ ಸಿಲಿಂಡರ್ ದರಗಳು ಹೋಟೆಲ್ ವ್ಯವಹಾರಕ್ಕೆ ಭಾರೀ ಹೊರೆ ತಂದಿದ್ದು, ಆಹಾರ ಪದಾರ್ಥಗಳ ಬೆಲೆ ಹೆಚ್ಚಳ ಅನಿವಾರ್ಯವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. “₹60 ಇದ್ದ ಮಸಾಲೆ ದೋಸೆ ಬೆಲೆ ₹120ಕ್ಕೆ ಏರಿಸಬೇಕಾದ ಪರಿಸ್ಥಿತಿ ಬರುತ್ತದೆ. ಇದು ಗ್ರಾಹಕರಿಗೆ ತುಂಬಾ ಹೊರೆ ಆಗುತ್ತದೆ,” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಆದರೆ ಗ್ರಾಹಕರ ಹಿತದೃಷ್ಟಿಯಿಂದ, ಹೆಚ್ಚಿದ ವೆಚ್ಚವಿದ್ದರೂ ಹೋಟೆಲ್ ಮಾಲೀಕರು ತಕ್ಷಣವೇ ಬೆಲೆ ಏರಿಕೆ ಮಾಡದೇ ತಡೆಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೂ, ಸಿಲಿಂಡರ್ ಕೊರತೆಯ ಪರಿಣಾಮವಾಗಿ ಕೆಲವು ತಿಂಡಿ ಪದಾರ್ಥಗಳ ತಯಾರಿಕೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಪುರಿ, ವಡೆ, ಭಜ್ಜಿ ಸೇರಿದಂತೆ ಎಣ್ಣೆ ಆಧಾರಿತ ಹಾಗೂ ಗ್ಯಾಸ್ ಹೆಚ್ಚು ಬಳಸುವ ಪದಾರ್ಥಗಳನ್ನು ತಯಾರಿಸುವುದನ್ನು ನಿಲ್ಲಿಸಲಾಗಿದ್ದು, ರೊಟ್ಟಿ, ಚಪಾತಿ ಹಾಗೂ ಫಾಸ್ಟ್ ಫುಡ್ ಪದಾರ್ಥಗಳಿಗೂ ಪರಿಣಾಮ ಬೀರಿದೆ.

ಈ ಬೆಳವಣಿಗೆಗಳು ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ತಳ್ಳುವಂತಾಗಿದ್ದು, ಗ್ರಾಹಕರಿಗೂ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಇಂತಹ ಸಂದರ್ಭಗಳಲ್ಲಿ ಖಾಸಗಿ ಗ್ಯಾಸ್ ಏಜನ್ಸಿಗಳ ನಿಯಂತ್ರಣ ಹಾಗೂ ಪರಿಶೀಲನೆಗೆ ಸಂಬಂಧಪಟ್ಟ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೋಟೆಲ್ ಮಾಲೀಕರು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ, ಜಾಗತಿಕ ಯುದ್ಧದ ಭೀತಿಯನ್ನು ನೆಪವನ್ನಾಗಿ ಮಾಡಿಕೊಂಡು ಸ್ಥಳೀಯ ಮಟ್ಟದಲ್ಲಿ ಅಕ್ರಮ ದಂಧೆ ನಡೆಯುತ್ತಿರುವ ಆರೋಪಗಳು ಕೇಳಿಬರುತ್ತಿರುವುದು ಚಿಂತಾಜನಕವಾಗಿದೆ. ಜಿಲ್ಲಾಡಳಿತ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಕ್ಷಣ ಹಸ್ತಕ್ಷೇಪ ಮಾಡಿ, ನಿಜಸ್ಥಿತಿ ಪತ್ತೆಹಚ್ಚಿ ಸಾರ್ವಜನಿಕರ ಹಿತವನ್ನು ಕಾಪಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande