
ಮೈಸೂರು, 22 ಮಾರ್ಚ್ (ಹಿ.ಸ.):
ಆ್ಯಂಕರ್:
ದೇಶದಲ್ಲಿ ಹೆಚ್ಚುತ್ತಿರುವ ಗ್ಯಾಸ್ ಕೊರತೆ ಹಿನ್ನೆಲೆಯಲ್ಲಿ ರೈತರಿಗೆ ಯಥನಾಲ್ ಉತ್ಪಾದನೆ ಹಾಗೂ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ, ಯುದ್ಧಭೀತಿಯ ಪರಿಣಾಮವಾಗಿ ವಿದೇಶಿ ಅನಿಲ ಪೂರೈಕೆ ಕಡಿಮೆಯಾಗಿದ್ದು, ದೇಶಾದ್ಯಂತ ಗ್ಯಾಸ್ ವಿತರಣೆಯಲ್ಲಿ ಅಭಾವ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಮನೆಮನೆಗೆ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸಲಾದರೂ, ಪ್ರಸ್ತುತ ಅನಿಲ ಕೊರತೆಯಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಈ ಸಂದರ್ಭದಲ್ಲಿ ವಿದೇಶಿ ವಿನಿಮಯ ಉಳಿಸಲು ದೇಶೀಯ ಯಥನಾಲ್ ಉತ್ಪಾದನೆಗೆ ಉತ್ತೇಜನ ನೀಡುವುದು ಅಗತ್ಯವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗ್ಯಾಸ್ ಸಿಲಿಂಡರ್‌ಗಳಿಗೆ ನೀಡುತ್ತಿರುವ ಸಬ್ಸಿಡಿಯನ್ನು ಯಥನಾಲ್ ಉತ್ಪಾದನೆ ಮಾಡುವ ರೈತರಿಗೆ ನೀಡಿದರೆ, ರೈತರ ಆದಾಯ ಹೆಚ್ಚುವುದರ ಜೊತೆಗೆ ಅನಿಲ ಕೊರತೆಯನ್ನೂ ಕಡಿಮೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. ಯಥನಾಲ್ ದ್ರವ ರೂಪದಲ್ಲಿರುವುದರಿಂದ, ಸಿಲಿಂಡರ್ ಸ್ಫೋಟದಂತಹ ಅಪಾಯಗಳು ಕಡಿಮೆ ಎನ್ನುವ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಹಿಂದಿನಂತೆ ನ್ಯಾಯಬೆಲೆ ಅಂಗಡಿಗಳ ಮೂಲಕ ಸೀಮೆಣೆಯನ್ನು ವಿತರಿಸಿದ ಮಾದರಿಯಲ್ಲಿ, ಯಥನಾಲ್ ಮಾರಾಟಕ್ಕೂ ಅವಕಾಶ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa