
ನವದೆಹಲಿ, 21 ಮಾರ್ಚ್ (ಹಿ.ಸ.):
ಆ್ಯಂಕರ್:
ದೇಶದ ಪರಿಸರ ವ್ಯವಸ್ಥೆ ಹಾಗೂ ಕೃಷಿಗೆ ಗಂಭೀರ ಬೆದರಿಕೆಯಾಗಿರುವ ‘ಆಕ್ರಮಣಕಾರಿ ವಿದೇಶಿ ಪ್ರಭೇದಗಳ ವಿರುದ್ಧ ಕ್ರಮ ಕೈಗೊಳ್ಳಲು ಎನ್‌ಬಿಎ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ.
ಈ ನಿರ್ಧಾರವು ಎನ್‌ಜಿಟಿ ನೀಡಿದ ಕಠಿಣ ನಿರ್ದೇಶನಗಳು ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಸಲಹೆಗಳ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿದೆ. ಮೂಲ ಅರ್ಜಿ ಸಂಖ್ಯೆ 162/2023 ಕುರಿತು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿದ ಎನ್‌ಜಿಟಿ, ವಿದೇಶಿ ಜಾತಿಗಳು ದೇಶೀಯ ಜೈವ ವೈವಿಧ್ಯತೆಯನ್ನು ಹಾಳು ಮಾಡುವುದರ ಜೊತೆಗೆ ಆಹಾರ ಭದ್ರತೆ, ಕೃಷಿ ಹಾಗೂ ಮಾನವ ಆರೋಗ್ಯಕ್ಕೂ ಅಪಾಯ ಉಂಟುಮಾಡುತ್ತಿರುವುದಾಗಿ ಆತಂಕ ವ್ಯಕ್ತಪಡಿಸಿತ್ತು.
ಸಮಿತಿಗೆ ಸಮಗ್ರ ಅಧ್ಯಯನ ನಡೆಸಿ, ತಂತ್ರಾತ್ಮಕ ಕಾರ್ಯಯೋಜನೆ ರೂಪಿಸುವ ಜವಾಬ್ದಾರಿ ನೀಡಲಾಗಿದೆ.
ಈ ಸಮಿತಿಗೆ ನಿವೃತ್ತ ಐಎಫ್‌ಎಸ್ ಅಧಿಕಾರಿ ಹಾಗೂ ಉತ್ತರಾಖಂಡದ ಮಾಜಿ ಪಿಸಿಸಿಎಫ್ ಧನಂಜಯ್ ಮೋಹನ್ ಅಧ್ಯಕ್ಷರಾಗಿದ್ದು, ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ. ಬಿಜು ಕುಮಾರ್ ಸಹಾಧ್ಯಕ್ಷರಾಗಿದ್ದಾರೆ. ವಿವಿಧ ಕೇಂದ್ರ ಸಚಿವಾಲಯಗಳು ಹಾಗೂ ಪ್ರಮುಖ ವೈಜ್ಞಾನಿಕ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಸಮಿತಿಯಲ್ಲಿ ಸೇರಿದ್ದಾರೆ.
ಜೈವಿಕ ವೈವಿಧ್ಯ ಕಾಯಿದೆ 2002 ಅಡಿಯಲ್ಲಿ ಸಮಿತಿಗೆ ಹಲವು ಪ್ರಮುಖ ಜವಾಬ್ದಾರಿಗಳನ್ನು ವಹಿಸಲಾಗಿದೆ. ಇವುಗಳಲ್ಲಿ ಆಕ್ರಮಣಕಾರಿ ಜಾತಿಗಳ ರಾಷ್ಟ್ರೀಯ ಪಟ್ಟಿಯನ್ನು ಸಿದ್ಧಪಡಿಸುವುದು, ಅಪಾಯ ಮೌಲ್ಯಮಾಪನ, ನಿರ್ವಹಣಾ ತಂತ್ರ ರೂಪಿಸುವುದು ಹಾಗೂ ಸಂಶೋಧನೆ ಮತ್ತು ದತ್ತಾಂಶ ಸಂಗ್ರಹಣೆ ಸೇರಿವೆ.
ಲ್ಯಾಂಟಾನಾ, ಜಲಕುಂಬಿ ಮೊದಲಾದ ಆಕ್ರಮಣಕಾರಿ ವಿದೇಶಿ ಸಸ್ಯಗಳು ದೇಶದ ಅರಣ್ಯ ಪ್ರದೇಶಗಳು ಹಾಗೂ ಜಲಾಶಯಗಳನ್ನು ವೇಗವಾಗಿ ಆಕ್ರಮಿಸುತ್ತಿರುವುದರಿಂದ ಪರಿಸರ ಸಮತೋಲನಕ್ಕೆ ಧಕ್ಕೆ ಉಂಟಾಗಿದೆ.
ಎರಡು ವರ್ಷದ ಅವಧಿಯ ಈ ಸಮಿತಿಯ ಕಾರ್ಯಭಾರ, ಭಾರತದ ಜಾಗತಿಕ ಜೈವ ವೈವಿಧ್ಯತೆಯ ಬದ್ಧತೆಗಳನ್ನು ಪೂರೈಸುವ ಜೊತೆಗೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮಹತ್ವದ ಮೈಲುಗಲ್ಲಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತಜ್ಞರ ಪ್ರಕಾರ, ಈ ಸಮಗ್ರ ಸರ್ಕಾರಿ ಕ್ರಮವು ಪರಿಸರ ರಕ್ಷಣೆಯ ಜೊತೆಗೆ ರೈತರ ಆದಾಯ ಹಾಗೂ ಗ್ರಾಮೀಣ ಜೀವನೋಪಾಯವನ್ನು ಕೂಡ ರಕ್ಷಿಸುವಲ್ಲಿ ಸಹಾಯಕವಾಗಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa