
ನವದೆಹಲಿ, 20 ಮಾರ್ಚ್ (ಹಿ.ಸ.):
ಆ್ಯಂಕರ್:
ಭಾರತವನ್ನು ಡೀಪ್-ಟೆಕ್ (ಆಳ ತಂತ್ರಜ್ಞಾನ) ಕ್ಷೇತ್ರದಲ್ಲಿ ಜಾಗತಿಕ ನಾಯಕರನ್ನಾಗಿಸಲು ಕೇಂದ್ರ ಶಿಕ್ಷಣ ಸಚಿವಾಲಯ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾರ್ಚ್ 21 ಮತ್ತು 22ರಂದು ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆ ಸಂಶೋಧನಾ ಉದ್ಯಾನವನದಲ್ಲಿ ‘ಭಾರತ್ ಇನೋವೇಟ್ಸ್ ಡೀಪ್-ಟೆಕ್ ಪ್ರೀ-ಸಮ್ಮಿಟ್’ ಆಯೋಜಿಸಿದೆ.
ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ದೇಶದಾದ್ಯಂತ ಬಂದ 3000ಕ್ಕೂ ಹೆಚ್ಚು ಅರ್ಜಿಗಳಲ್ಲಿ ಆಯ್ಕೆಯಾದ ಸುಮಾರು 137 ಉದಯೋನ್ಮುಖ ಡೀಪ್-ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಈ ವೇದಿಕೆ ರಾಷ್ಟ್ರೀಯ ಮಟ್ಟದ ಅವಕಾಶ ಕಲ್ಪಿಸಲಿದೆ. ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಸ್ಟಾರ್ಟ್‌ಅಪ್ ಸ್ಥಾಪಕರು, 70ಕ್ಕೂ ಹೆಚ್ಚು ಹೂಡಿಕೆದಾರರು ಹಾಗೂ ವೆಂಚರ್ ಕ್ಯಾಪಿಟಲ್ ಪ್ರತಿನಿಧಿಗಳು ಮತ್ತು 50ಕ್ಕೂ ಹೆಚ್ಚು ಕೈಗಾರಿಕಾ ನಾಯಕರ ಭಾಗವಹಿಸುವಿಕೆ ನಿರೀಕ್ಷಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ವಿಜ್ಞಾನ ಸಲಹೆಗಾರ ಅಜಯ ಕುಮಾರ ಸೂದ ಸೇರಿದಂತೆ ಹಿರಿಯ ವಿಜ್ಞಾನಿಗಳು, ಶಿಕ್ಷಣತಜ್ಞರು ಹಾಗೂ ನೀತಿ ರೂಪಕಾರರು ಪಾಲ್ಗೊಳ್ಳಲಿದ್ದಾರೆ. ಶಿಕ್ಷಣ ಮತ್ತು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಉನ್ನತ ಅಧಿಕಾರಿಗಳು ಹಾಗೂ ಐಐಟಿಗಳೊಂದಿಗೆ ಸಂಬಂಧಿಸಿದ ಡೀಪ್-ಟೆಕ್ ಉದ್ಯಮಿಗಳೂ ಹಾಜರಾಗಲಿದ್ದಾರೆ.
‘ಭಾರತ್ ಇನೋವೇಟ್ಸ್’ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾರತ–ಫ್ರಾನ್ಸ್ ನವೋದ್ಯಮ ವರ್ಷದ ಉದ್ಘಾಟನೆಯ ವೇಳೆ ಘೋಷಿಸಿದ್ದರು. ಉನ್ನತ ಶಿಕ್ಷಣ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಜಾಗತಿಕ ಹೂಡಿಕೆದಾರರ ನಡುವೆ ಬಲವಾದ ಸಹಭಾಗಿತ್ವ ಬೆಳೆಸುವುದು ಇದರ ಉದ್ದೇಶವಾಗಿದೆ.
ಈ ಪ್ರೀ-ಸಮ್ಮಿಟ್‌ನಲ್ಲಿ 13 ಪ್ರಮುಖ ತಂತ್ರಜ್ಞಾನ ಕ್ಷೇತ್ರಗಳಾದ ಅಡ್ವಾನ್ಸ್ಡ್ ಕಂಪ್ಯೂಟಿಂಗ್, ಹೆಲ್ತ್‌ಕೇರ್ ಮತ್ತು ಮೆಡ್‌ಟೆಕ್, ಸ್ಪೇಸ್ ಮತ್ತು ಡಿಫೆನ್ಸ್, ಎನರ್ಜಿ ಮತ್ತು ಸಸ್ಟೈನಬಿಲಿಟಿ, ಸೆಮಿಕಂಡಕ್ಟರ್, ಬಯೋಟೆಕ್ನಾಲಜಿ, ಸ್ಮಾರ್ಟ್ ಸಿಟೀಸ್, ಅಗ್ರಿ-ಟೆಕ್ ಹಾಗೂ ಇಂಡಸ್ಟ್ರಿ 4.0 ಕ್ಷೇತ್ರಗಳ ನವೀನತೆಗಳನ್ನು ಪ್ರದರ್ಶಿಸಲಾಗುತ್ತದೆ.
ಈ ಕಾರ್ಯಕ್ರಮವು ಭಾರತೀಯ ಡೀಪ್-ಟೆಕ್ ಸ್ಟಾರ್ಟ್‌ಅಪ್‌ಗಳನ್ನು ಜಾಗತಿಕ ವೇದಿಕೆಗೆ ಪರಿಚಯಿಸುವುದು, ಹೂಡಿಕೆ ಆಕರ್ಷಿಸುವುದು ಹಾಗೂ ಸಂಶೋಧನೆಯಿಂದ ಮಾರುಕಟ್ಟೆಯವರೆಗೆ ಸಂಪರ್ಕ ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಜೊತೆಗೆ, ಜೂನ್ 2026ರಲ್ಲಿ ಫ್ರಾನ್ಸ್‌ನ ನೀಸ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಇನೋವೇಷನ್ ಪ್ರದರ್ಶನಕ್ಕೆ ಭಾರತೀಯ ಸ್ಟಾರ್ಟ್‌ಅಪ್‌ಗಳ ಆಯ್ಕೆಗೂ ಇದು ಆಧಾರವಾಗಲಿದೆ.
ರಾಷ್ಟ್ರೀಯ ಶಿಕ್ಷಣ ನೀತಿ–2020 ಅಡಿಯಲ್ಲಿ ನವೀನತೆಯನ್ನು ಉತ್ತೇಜಿಸುವ ಈ ಉಪಕ್ರಮ ‘ವಿಕಸಿತ ಭಾರತ 2047’ ಗುರಿಯತ್ತ ಮಹತ್ವದ ಹೆಜ್ಜೆಯಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa