ಎಲ್ಪಿಜಿ ಉತ್ಪಾದನೆ ಸ್ಥಿರ, ಸಾಕಷ್ಟು ಸಂಗ್ರಹ ಲಭ್ಯ:ಕೇಂದ್ರ ಸರ್ಕಾರ ಸ್ಪಷ್ಟನೆ
ನವದೆಹಲಿ, 20 ಮಾರ್ಚ್ (ಹಿ.ಸ.): ಆ್ಯಂಕರ್: ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ದೇಶದಲ್ಲಿ ಎಲ್‌ಪಿಜಿ ಉತ್ಪಾದನೆ ಸ್ಥಿರವಾಗಿದ್ದು, ಅಗತ್ಯಕ್ಕಿಂತಲೂ ಹೆಚ್ಚು ಸಂಗ್ರಹ ಲಭ್ಯವಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ
Sujata sharma


ನವದೆಹಲಿ, 20 ಮಾರ್ಚ್ (ಹಿ.ಸ.):

ಆ್ಯಂಕರ್:

ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ದೇಶದಲ್ಲಿ ಎಲ್‌ಪಿಜಿ ಉತ್ಪಾದನೆ ಸ್ಥಿರವಾಗಿದ್ದು, ಅಗತ್ಯಕ್ಕಿಂತಲೂ ಹೆಚ್ಚು ಸಂಗ್ರಹ ಲಭ್ಯವಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಂಯುಕ್ತ ಕಾರ್ಯದರ್ಶಿ ಸುಜಾತಾ ಶರ್ಮಾ ಮಾಹಿತಿ ನೀಡಿ, ದೇಶದ ಎಲ್ಲಾ ರಿಫೈನರಿಗಳು ಸಾಕಷ್ಟು ಕಚ್ಚಾ ತೈಲ ಸಂಗ್ರಹದೊಂದಿಗೆ ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಕಂಡುಬಂದಿಲ್ಲ ಎಂದರು.

ದೇಶದಲ್ಲಿ ಸುಮಾರು 93 ಶೇಕಡಾ ಎಲ್‌ಪಿಜಿ ಬುಕ್ಕಿಂಗ್‌ಗಳು ಆನ್‌ಲೈನ್ ಮೂಲಕ ನಡೆಯುತ್ತಿದ್ದು, ಸರಿಯಾದ ಸಮಯಕ್ಕೆ ವಿತರಣೆ ಖಚಿತವಾಗುತ್ತಿದೆ. ಇದುವರೆಗೆ ಸುಮಾರು 7,500 ಗ್ರಾಹಕರು ಎಲ್‌ಪಿಜಿಯಿಂದ ಪಿಎನ್‌ಜಿ (ಪೈಪ್‌ಡ್ ನ್ಯಾಚುರಲ್ ಗ್ಯಾಸ್)ಗೆ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. ಗ್ರಾಹಕರನ್ನು ಪಿಎನ್‌ಜಿ ಬಳಕೆಗೆ ಉತ್ತೇಜಿಸಲಾಗುತ್ತಿದೆ ಎಂದರು.

ಹೆಚ್ಚುವರಿಯಾಗಿ, 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಾಣಿಜ್ಯ ಎಲ್‌ಪಿಜಿ ಹಂಚಿಕೆ ಮಾಡಲಾಗಿದೆ. ಕಳೆದ ವಾರ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಂತಹ ಪ್ರಮುಖ ಕ್ಷೇತ್ರಗಳಿಗೆ ಸುಮಾರು 11,300 ಟನ್ ಎಲ್‌ಪಿಜಿ ಪೂರೈಕೆ ಮಾಡಲಾಗಿದೆ. ಕಾಳ ಸಂತೆ ತಡೆಯಲು ನಿಯಂತ್ರಣ ಕೊಠಡಿಗಳು, ಜಿಲ್ಲಾ ಸಮಿತಿಗಳು ಹಾಗೂ ತೈಲ ಮಾರಾಟ ಕಂಪನಿಗಳು ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸುತ್ತಿವೆ ಎಂದು ಹೇಳಿದರು.

ಜನರು ಆತಂಕಕ್ಕೆ ಒಳಗಾಗಿ ಅನಾವಶ್ಯಕವಾಗಿ ಬುಕ್ಕಿಂಗ್ ಮಾಡಬಾರದು, ಅಧಿಕೃತ ಮಾಹಿತಿಯನ್ನೇ ನಂಬಿ ಮನೆಗೆ ವಿತರಣೆ ಆಗುವವರೆಗೆ ಕಾಯಬೇಕು ಎಂದು ಸರ್ಕಾರ ಮನವಿ ಮಾಡಿದೆ.

ಪ್ರೀಮಿಯಂ ಪೆಟ್ರೋಲ್ ಬೆಲೆ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸಾಮಾನ್ಯ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕೇವಲ ಪ್ರೀಮಿಯಂ ಪೆಟ್ರೋಲ್ ದರದಲ್ಲಿ ಮಾತ್ರ ಸ್ವಲ್ಪ ಏರಿಕೆಯಾಗಿದೆ, ಅದು ಒಟ್ಟು ಮಾರಾಟದ 2ರಿಂದ 4 ಶೇಕಡಾ ಭಾಗವಷ್ಟೇ ಆಗಿದೆ ಎಂದು ಸ್ಪಷ್ಟಪಡಿಸಿದರು.

ಇದರ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಓಮಾನ್, ಮಲೇಶಿಯಾ, ಫ್ರಾನ್ಸ್, ಜೋರ್ಡನ್ ಮತ್ತು ಕತಾರ್ ರಾಷ್ಟ್ರಗಳ ನಾಯಕರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ, ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಭಾರತದ ನಿಲುವು ಸ್ಪಷ್ಟಪಡಿಸಿದರು. ಸಂವಾದ, ಉದ್ವಿಗ್ನತೆ ಕಡಿತ ಹಾಗೂ ಶಾಂತಿ ಸ್ಥಾಪನೆಗೆ ಒತ್ತು ನೀಡಿದರು. ಇಂಧನ ಮೂಲಸೌಕರ್ಯಗಳ ಮೇಲೆ ದಾಳಿಗಳನ್ನು ಖಂಡಿಸಿದರು.

ವಿದೇಶಾಂಗ ಸಚಿವಾಲಯದ ಪ್ರಕಾರ, ಭಾರತವು ಈಗಾಗಲೇ ಆರ್ಮೇನಿಯಾ–ಅಜರ್‌ಬೈಜಾನ್ ಮಾರ್ಗದ ಮೂಲಕ 913 ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದು, ಇವರಲ್ಲಿ 284 ಯಾತ್ರಿಕರು ಸೇರಿದ್ದಾರೆ. ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದೆ.

ಇದೇ ವೇಳೆ, ಕಳೆದ 24 ಗಂಟೆಗಳಲ್ಲಿ ಫಾರ್ಸಿ ಖಡಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ 22 ಭಾರತೀಯ ಹಡಗುಗಳು ಮತ್ತು 611 ನಾವಿಕರು ಸುರಕ್ಷಿತರಾಗಿದ್ದಾರೆ ಎಂದು ಬಂದರು, ಹಡಗು ಸಾರಿಗೆ ಮತ್ತು ಜಲಮಾರ್ಗ ಸಚಿವಾಲಯ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande