
ಬೆಂಗಳೂರು, 02 ಮಾರ್ಚ್ (ಹಿ.ಸ.):
ಆ್ಯಂಕರ್:
ರಾಜ್ಯ ಸರ್ಕಾರ ಆಡಳಿತಕ್ಕಿಂತ ರಾಜಕೀಯ ಕಣ್ಗಾವಲಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ರಾಜ್ಯ ಗುಪ್ತಚರ ಇಲಾಖೆಯ ದುರುಪಯೋಗ ನಡೆಯುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ರಾಜ್ಯಕ್ಕೆ ಸಮರ್ಪಕ ಆಡಳಿತ ಬೇಕು, ಕಣ್ಗಾವಲು ರಾಜಕೀಯವಲ್ಲ. ಆದರೆ ಇದೀಗ ಗುಪ್ತಚರ ಇಲಾಖೆಗೆ ಪೂರ್ಣಾವಧಿಯ ಕೆಲಸ ಸಿಕ್ಕಿರುವುದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಣದ ಭೋಜನ ಕೂಟಗಳ ಹಾಜರಾತಿ ಪತ್ತೆಹಚ್ಚುವುದೇ?” ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಔಷಧ ಕಾರ್ಖಾನೆಗಳು ಅನಿಯಂತ್ರಿತವಾಗಿ ಕಾರ್ಯನಿರ್ವಹಿಸುತ್ತಿವೆ. ಹಲವೆಡೆ ಕೋಮು ಉದ್ವಿಗ್ನತೆ ಹೆಚ್ಚಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ದುರ್ಬಲಗೊಂಡಿದೆ ಎಂಬ ಆತಂಕ ವ್ಯಕ್ತಪಡಿಸಿದ ಅವರು, “ಇಂತಹ ಗಂಭೀರ ಸಮಸ್ಯೆಗಳ ಮಧ್ಯೆಯೂ ಸರ್ಕಾರದ ಪ್ರಮುಖ ಆದ್ಯತೆ ಶಾಸಕರನ್ನು ಎಣಿಸುವುದು ಮತ್ತು ರಾಜಕೀಯ ಪ್ರತಿಸ್ಪರ್ಧಿಗಳನ್ನು ನರಳಿಸುವುದಾಗಿದೆ” ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಯಕ್ತಿಕ ರಾಜಕೀಯ ಉಳಿವಿಗಾಗಿ ಆಡಳಿತ ಯಂತ್ರವನ್ನು ಬಳಸುತ್ತಿದ್ದಾರೆ ಎಂದು ಅಶೋಕ್ ಟೀಕಿಸಿದರು. “ರಾಜ್ಯ ಆಡಳಿತ ಯಂತ್ರ ಕರ್ನಾಟಕದ ಜನರನ್ನು ರಕ್ಷಿಸಲು, ನಿಮ್ಮ ಕುರ್ಚಿಯನ್ನು ರಕ್ಷಿಸಲು ಅಲ್ಲ” ಎಂದಿದ್ದಾರೆ.
ಸರಕಾರಿ “ಸಂಸ್ಥೆಗಳ ದುರುಪಯೋಗ ಮತ್ತು ಆಯುಧೀಕರಣದ ಬಗ್ಗೆ ಮಾತನಾಡುವ ರಾಹುಲ್ ಗಾಂಧಿ ಈಗ ಎಲ್ಲಿದ್ದಾರೆ? ಈ ವಿಚಾರದಲ್ಲಿ ಮೌನ ಏಕೆ?” ಎಂದು ಪ್ರಶ್ನಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa