
ಧಾರವಾಡ, 02 ಮಾರ್ಚ್ (ಹಿ.ಸ.):
ಆ್ಯಂಕರ್:
ಹಸಿವು, ಅರಿವು, ಮರೆವು, ಸಾವು ಎಲ್ಲವೂ ದೇವರು ಕೊಟ್ಟ ವರ, ದೇವರು ಕೊಟ್ಟಿದ್ದನ್ನು ಅರ್ಥ ಮಾಡಿಕೊಂಡರೆ ದೈವ ಸಂಗಮದ ಪ್ರತೀಕವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಣಕವಾಡ ಗ್ರಾಮದಲ್ಲಿ ನಿರಂಜನಜ್ಯೋತಿ ಮೃತ್ಯುಂಜಯ ಅಜ್ಜನ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
ಮಣಕವಾಡ ಗುರುಗಳ ಅದ್ಬುತ ವ್ಯಕ್ತಿತ್ವ. ಅವರ ಸಮಯೋಚಿತವಾದ ಮಾತುಗಳಿಂದ ಎಲ್ಲರ ಮನಸ್ಸು ಗೆಲ್ಲುವ ಸ್ವಾಮಿಜಿ ನಮಗೆ ಸಿಕ್ಕಿರುವುದು ಪುಣ್ಯ. ನಾನು ಹಿರಿಯ ಗುರುಗಳನ್ನು ನೋಡಿದ್ದೇನೆ ಅವರು ಲೌಕಿಕ ಸಂಬಂಧದಿಂದ ಬಹಳ ದೂರ ಇದ್ದರು. ಆಗ ಮಠ ಬಹಳ ಸಣ್ಣದು ಜನ ಬಂದರೂ ಅವರ ಭೇಟಿಗೆ ಅವಕಾಶ ಸಿಗುತ್ತಿರಲಿಲ್ಲ. ಅವರ ಭೇಟಿಗೆ ಅವಕಾಶ ಸಿಕ್ಕರೆ ಭಾಗ್ಯ. ಮಣಕವಾಡದ ಹಿರಿಯರು ನನ್ನನ್ನು ಹಿರಿಯ ಸ್ವಾಮೀಜಿ ಬಳಿ ಕರೆದುಕೊಂಡು ಹೋಗಿದ್ದರು. ಆಗ ಸ್ವಾಮೀಜಿ ನನ್ನನ್ನು ಕರೆದು ಪ್ರೀತಿಯಿಂದ ಮಾತನಾಡಿಸಿ ಆಶೀರ್ವಾದ ಮಾಡಿದರು. ಆ ಆಶೀರ್ವಾದದಲ್ಲಿ ಈ ನಾಡಿನ ಸಿಎಂ ಆಗುವ ಶಕ್ತಿ ಇದೆ ಅಂತ ಈಗ ಗೊತ್ತಾಗುತ್ತಿದೆ. ಆ ಶಕ್ತಿಯನ್ನು ಈಗಿನ ಪರಮಪೂಜ್ಯರಿಗೆ ಕೊಟ್ಟಿದ್ದಾರೆ. ಅದಕ್ಕಾಗಿ ಸರಸ್ವತಿ ಅವರ ನಾಲಿಗೆ ಮೇಲಿದ್ದಾಳೆ ಎಂದು ಹೇಳಿದರು.
ಒಳ್ಳೆಯ ಮಾತನಾಡುವವರು ಬಹಳ ಜನ ಇದ್ದಾರೆ. ರಾಜಕಾರಣಿ, ಗುರುಗಳು ಇದ್ದಾರೆ ಆದರೆ ಮಾತಿನ ಶಕ್ತಿ ಯಾವ ರೀತಿ ಕಾರ್ಯ ರೂಪಕ್ಕೆ ಬರುತ್ತದೆ ಎನ್ನುವುದು ಮುಖ್ಯ. ಅದಕ್ಕೆ ಭಗವಂತ ನಾಲಿಗೆಗೆ ಎಲುಬು ಕೊಟ್ಡಿಲ್ಲ. ನಾಲಿಗೆಗೆ ಎಲುಬು ಕೊಟ್ಟಿದ್ದರೆ ಸುಳ್ಳು ಹೇಳಿದಾಗೊಮ್ಮೆ ನಾಲಿಗೆ ಮುರಿಯುತ್ತಿತ್ತು. ದೇವರು ಬಹಳ ಸುಳ್ಳು ಹೇಳುತ್ತಿ ಎಂದು ನಾಲಿಗೆಯನ್ನೆ ತಿರುಗಿಸುತ್ತಿದ್ದ. ಆದರೆ ಭಗವಂತ ನಮಗೆ ಕೊಟ್ಟಿರುವ ಶಕ್ರಿಯನ್ನು, ಅಂಗವನ್ನು ಯಾವ ರೀತಿ ಬಳಸುತ್ತೇವೆ ಅನ್ನುವುದನ್ನು ಪರೀಕ್ಷೆ ಮಾಡಲು ಕೊಟ್ಟಿದ್ದಾನೆ. ಹೃದಯದಿಂದ ಮೇಲೆ ಬಂದಾಗ ಸತ್ಯ ನುಡಿಯುತ್ತೇವೆ. ಬುದ್ದಿ ಬಳಕೆ ಮಾಡಿದಾಗ ಸಾಂದರ್ಭಿಕವಾಗಿ ಮಾತನಾಡುತ್ತೇವೆ. ಭಗವಂತ ಕೊಟ್ಟಿದ್ದನ್ನು ತಿಳಿದುಕೊಳ್ಳದೆ ಕಷ್ಟ ಅನುಭವಿಸುತ್ತೇವೆ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa