
ಬೆಂಗಳೂರು, 02 ಮಾರ್ಚ್ (ಹಿ.ಸ.):
ಆ್ಯಂಕರ್:ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಪರಿಸ್ಥಿತಿ ತೀವ್ರಗೊಂಡ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ ವಾಯುಪ್ರದೇಶದ ಮೇಲೆ ನಿರ್ಬಂಧಗಳು ಜಾರಿಯಾಗಿವೆ. ಇದರ ಪರಿಣಾಮವಾಗಿ ಇಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಂದ ಸಂಚರಿಸಬೇಕಿದ್ದ ಒಟ್ಟು 22 ವಿಮಾನಗಳ ಹಾರಾಟ ರದ್ದುಗೊಂಡಿದೆ.
ವಿಮಾನ ನಿಲ್ದಾಣ ಮೂಲಗಳ ಪ್ರಕಾರ, ಬೆಂಗಳೂರಿನಿಂದ ವಿದೇಶಗಳಿಗೆ ತೆರಳಬೇಕಿದ್ದ 10 ವಿಮಾನಗಳು ಹಾಗೂ ವಿದೇಶಗಳಿಂದ ಆಗಮಿಸಬೇಕಿದ್ದ 12 ವಿಮಾನಗಳು ರದ್ದಾಗಿವೆ. ಯುದ್ಧದ ಹಿನ್ನೆಲೆ ಕೆಲವು ವಾಯುನೆಲೆಗಳನ್ನು ಮುಚ್ಚಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಅಬುಧಾಬಿ, ಜಿದ್ದಾ, ದೋಹಾ, ದುಬೈ ಹಾಗೂ ಬಹ್ರೇನ್ ಮಾರ್ಗಗಳ ವಿಮಾನ ಸೇವೆಗಳು ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮಗೊಂಡಿವೆ. ಈ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಏರ್‌ಲೈನ್ಸ್‌ಗಳಾದ ಏರ್ ಇಂಡಿಯಾ, ಎಮಿರೇಟ್ಸ್, ಇಂಡಿಗೋ ಮತ್ತು ಕತಾರ್ ಏರ್ವೇಸ್ ಸೇರಿದಂತೆ ಹಲವು ಸಂಸ್ಥೆಗಳು ತಾತ್ಕಾಲಿಕವಾಗಿ ಹಾರಾಟ ಸ್ಥಗಿತಗೊಳಿಸಿವೆ.
ರದ್ದಾದ ವಿಮಾನಗಳಲ್ಲಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಟಿಕೆಟ್ ಮರುನಿಗದಿ ಅಥವಾ ಸಂಪೂರ್ಣ ಹಣ ಹಿಂತಿರುಗಿಸುವ ಅವಕಾಶ ನೀಡಲಾಗಿದೆ. ಏರ್‌ಲೈನ್ಸ್‌ಗಳು ಎಸ್‌ಎಂಎಸ್ ಹಾಗೂ ಇಮೇಲ್ ಮೂಲಕ ಪ್ರಯಾಣಿಕರಿಗೆ ಮಾಹಿತಿ ರವಾನಿಸುತ್ತಿವೆ.
ವಿಮಾನ ಹಾರಾಟದ ಸ್ಥಿತಿ ದೃಢಪಡಿಸದೇ ವಿಮಾನ ನಿಲ್ದಾಣಕ್ಕೆ ಬಾರದಂತೆ ಪ್ರಯಾಣಿಕರಿಗೆ ಆಡಳಿತ ಮಂಡಳಿ ಮನವಿ ಮಾಡಿದೆ. ಸಾಮಾಜಿಕ ಜಾಲತಾಣಗಳು ಹಾಗೂ ಹೆಲ್ಪ್‌ಡೆಸ್ಕ್ ಮೂಲಕ ನಿರಂತರ ಮಾಹಿತಿ ನೀಡಲಾಗುತ್ತಿದೆ.
ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಸಾಮಾನ್ಯವಾಗುವವರೆಗೆ ವಿದೇಶಿ ಮಾರ್ಗಗಳ ಸಂಚಾರದಲ್ಲಿ ವ್ಯತ್ಯಯ ಮುಂದುವರಿಯುವ ಸಾಧ್ಯತೆ ಇದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa